Friday, March 09, 2007

೧೨. ನಾ ತಿಂದ 'ನಾನು'!


ನನ್ನ ಜಪಾನ್ ಪ್ರವಾಸ : ೧೨. ನಾ ತಿಂದ 'ನಾನು'!
--------------------------------------------


"ಲೋ! ನೀನೇನಾದ್ರೂ ಹೀಗೇ ಲೆಕ್ಕ ಹಾಕುತ್ತಿದ್ದರೇ . . ಅಷ್ಟೇ ನೀನೇನೂ ಎಂಜಾಯ್ ಮಾಡಕ್ಕಾಗಲ್ಲವೋ" ಎಂದು ಗೋವರ್ಧನ್ ಗದರಿಕೊಂಡ.

ನಾನು "ಹಾಗಂತೀಯಾ. . ಸರಿ ಒಪ್ಪಿದೆ ; ನಡಿ ಹೋಗೋಣ" ಎಂದೆ.

ಈ ಮಾತು ಶುರುವಾಗಿದ್ದು ಭಾರತೀಯ ಉಪಾಹಾರಗೃಹಕ್ಕೆ ಹೋಗೋಣ ಎಂದವನು ರಾಗ ತೆಗೆದಾಗ!! ನನಗೇನೋ ಒಪ್ಪಿಗೆಯೇ. . ಆದರೆ ಒಪ್ಪೊತ್ತಿನ ಊಟಕ್ಕೇ ೧೦೦೦ದಿಂದ ೨೦೦೦ ಯೆನ್ ಖರ್ಚಾಗುತ್ತದೆ ಎಂದಾಗ ಹೌಹಾರಿ ಬೇಡಪ್ಪಾ ಎಂದೆ!

"ಲೋ ಭಟ್ಟಾ! ನಡಿಯೋ ಸ್ವಲ್ಪ ಒಳ್ಳೇ ಊಟ ಮಾಡೋಣ" ಎಂದು ಎಳೆದುಕೊಂಡು ಹೋದ!! ಜೊತೆಗೆ ವರ್ಣೇಕರನೂ ಬಂದ . ನಾವೆಲ್ಲರೂ ನುಗ್ಗಿದ್ದು ಓಸಾಕಾದ ದೋತೊಂಬೊರಿ( ಕೊತ್ತಂಬರಿ ಅಲ್ಲಾರೀ. . .) ಯಲ್ಲಿದ್ದ ಒರಿಸ್ಸಾ ಮೂಲದ ಖಾನಾವಳಿ "ಸಂತಾನ"ಕ್ಕೆ. ಇದ್ಯಾವ ಸಂತಾನವೋ ಕಾಣೆ ಎಂದುಕೊಂಡು ಒಳನಡೆದೆ. ಮೆನು ಬಂತು; ನಾನು ನೋಡಿದೆ - ಇದ್ದುದರಲ್ಲಿಯೇ ಅತಿಕಡಿಮೆ ಬೆಲೆಯ ಬೆಳಗಿನ ಊಟ ೧೨೫೦ ಯೆನ್. ವಿಧಿಯಿಲ್ಲದೆ ಅದನ್ನೇ ತರಿಸಿದೆವು. ಉತ್ತರ ಭಾರತದ 'ಥಾಲಿ' ಊಟ - ೨ ವಿಧದ 'ಕರಿ', ಗರಿಗರಿ ಪಕೋಡ, ಪುದೀನ ಚಟ್ನಿ, ಒಂದು ಬಟ್ಟಲು ಬಟಾಣಿ-ತರಕಾರಿಯ ಚಿತ್ರಾನ್ನ, ಸ-ಮೋಸ ಮತ್ತೊಂದು ನಾನು!

"ನಾ ನಾನೆಂದರೆ ನಾನಲ್ಲ! ಈ ಮಾನವ ಜನ್ಮವು ನಾನಲ್ಲ!".....ಶಿಶುನಾಳ ಶರೀಫರ ನೆನಪಾಯಿತೇ? ಅಂಥ ಗಹನಾರ್ಥವೇನಿಲ್ಲ ಬಿಡಿ; ಆ ನಾನು ಈ ನಾನಲ್ಲ; ಇದು ತಿನ್ನುವ 'ನಾನು'. ಅಂದರೆ 'ನಾನ್' ರೊಟ್ಟಿ! ತಿಂಗಳಿನಿಂದ ಸರಿಯಾಗಿ ಊಟ ಮಾಡಿರಲಿಲ್ಲ ನೋಡಿ-ಸರಿಯಾಗಿ ಜಡಿದೆ! ಆಮೇಲೆ ಖಾನಾವಳಿಯ ಯಜಮಾನನಿಂದ ಮಸಾಲೆ ಚಹಾ ಬೇರೆ ಬಂತು! ಭಲಾ ಎಂದುಕೊಂಡೆ. ಅಲ್ಲಿದ್ದವರಿಗೆ ವರ್ಣೇಕರ ಬಹಳ ಪರಿಚಿತನೋ ಏನೋ,ಬಹಳ ಮಾತನಾಡುತ್ತಿದ್ದ! ಕೊನೆಗೆ ನನ್ನ ಪರಿಚಯ ಅಡುಗೆ ಭಟ್ಟರಿಗೆ! ಅವರಿಗಾಗಲೇ 'ಕುಮಾರ್' ಎಂಬ ಹೆಸರು ಕೇಳಿ ಕೇಳಿ ಸಾಕಾಗಿತ್ತೇನೋ,

"ಇವರೂ ಕುಮಾರ್ ಅಲ್ಲ ತಾನೇ?" ಎಂದರು.

ಗೋವರ್ಧನನೆಂದ "ನಾವೆಲ್ಲರೂ ಶಾಸ್ತ್ರೀ ಎನ್ನುತ್ತೇವೆ".

ಈಗ ಅವರಿಗೆ ಸಮಾಧಾನ - ಕರೆಯಲು ಬೇರೆ ಹೆಸರಿದೆಯಲ್ಲಾ ಎಂದು. ಅದುವರೆಗೂ ತಿಂಡಿ ತಿನಿಸು ತಂದಿಟ್ಟು ಜಪಾನೀ ಭಾಷೆಯಲ್ಲಿ ಪಟಪಟನೆ ಮಾತನಾಡುತ್ತಿದ್ದ ಮತ್ತೊಬ್ಬ ಭಾರತೀಯ ಅಲ್ಲಿದ್ದ! ಅವನೇ ಕುನ್ನ - ಕುನ್ನ ದಾಸ್ - ಒರಿಸ್ಸಾದವನು; ಅಂಗಡಿಯ ಮಾಲೀಕ!

"ನಿಮ್ಮ ಜಪಾನೀ ಭಾಷೆ ಸಿಕ್ಕಾಪಟ್ಟೆ ವೇಗವಾಗಿದೆ" ಎಂದೆ!

"ಅದೇನಿಲ್ಲ, ೧೦ ವರ್ಷದಿಂದ ಇಲ್ಲಿದ್ದೇನೆ ಅದಕ್ಕೇ ಹೀಗೆ; ನೀವೂ ಇದ್ದರೆ ನೀವೂ ಹಾಗೇ" ಎಂದ.

ಗೋವರ್ಧನ ಕನ್ನಡದಲ್ಲಿ ಕಿವಿಯೊಳಗೂದಿದ "ಅವನ ಹೆಂಡತಿ ಜಪಾನೀ ಕಣಯ್ಯಾ - ಅವನೇನು ಮಜವಾಗಿದ್ದಾನೆ!!" ನಾನು ಅಚ್ಚರಿಗೊಂಡೆ! ಗೋವರ್ಧನ ಕುನ್ನನಿಗೆ ನನ್ನ ಪೂರ್ವಾಪರಗಳನ್ನೆಲ್ಲ ಅಚ್ಚುಕಟ್ಟಾಗಿ ಹೇಳಿದ.

ಕುನ್ನನಿಗೆ ಖುಷಿ - "ಶಾಸ್ತ್ರೀಜಿ, ಆಪ್ ಆತೇ ರಹಿಯೇ. . ಆಪ್‍ಕೀ ಶಾಸ್ತ್ರ್‌ಸೇ ಬಹುತ್ ಕುಛ್ ಹೋತಾ ಹೈ" ಎಂದ. ಆಗಲೆಂದೆ.
ಅಷ್ಟರಲ್ಲಿ ಅಡುಗೆ ಮನೆಯಿಂದ ಬಂದ 'ಪರಮಾನಂದ' ಕೈ ಮುಂಚಾಚಿ "ಪಂಡಿತ್‍ಜೀ, ಬೋಲಿಯೇ ಹಮಾರಾ ಭವಿಷ್ಯ್ ಮೇ ಕ್ಯಾ ಹೈ?" ಎಂದ.
ಕುನ್ನನೂ ಬಂದ, ಮತ್ತೊಬ್ಬನೂ ಬಂದ! ಎಲ್ಲ, ಬಹುಕಾಲದ ಮಿತ್ರರಂತೆ ಮಾತನಾಡಿದೆವು. ಎಲ್ಲ ಖುಷಿಯಾದರು. "ಪಂಚಾಂಗ ಹೊರತೆಗೆವ ಕಾಲ ಬಂದಿದೆ" ಎಂದುಕೊಂಡೆ.

ಕುನ್ನನೆಂದ- "ನೀವು ಜಪಾನೀ ಭಾಷೆಯಲ್ಲಿ ಹೇಳುವಿರಾದರೆ ಇಲ್ಲಿ ಬಹಳವಾಗಿ ಮಿತ್ರರಾಗುವವರಿದ್ದಾರೆ; ನೀವು ಬನ್ನಿ ಪರಿಚಯಿಸುತ್ತೇನೆ".
ಸಾಲದ್ದಕ್ಕೆ "ಮತ್ತೆ ಭಾರತಕ್ಕೆ ಹೋಗಬೇಕಾದಲ್ಲಿ ಹೇಳಿ, ರಿಯಾಯ್ತಿ ದರದಲ್ಲಿ ಟಿಕೆಟ್ ಕೊಡಿಸುತ್ತೇನೆ" ಎಂದ.

ಭಲಾ ಎಂದುಕೊಂಡೆ! ವಂದನೆ ಹೇಳಿ ೧೨೫೦ ಯೆನ್ ಕೊಟ್ಟು ಹೊರಬಿದ್ದೆವು. ನಾನು ತೆರಿಗೆ ತೆಗೆದುಕೊಳ್ಳುವುದಿಲ್ಲ" ಎಂದ ಕುನ್ನ. ಜಪಾನಿನಲ್ಲಿ ಎಲ್ಲಿ ಏನು ಕೊಂಡರು ೫% ಗ್ರಾಹಕ ತೆರಿಗೆ ಕೊಡಲೇಬೇಕು!! ಇವನು ಬೇಡವೆಂದ!'ಏನೋ ಐತ್ರೀ ಸಮಾಚಾರ' ಎಂದುಕೊಂಡು ಸುಮ್ಮನಾದೆ; ಹೊರಬಿದ್ದ ಮೇಲೆ ಕೇಳಿದರೆ ಗೋವರ್ಧನನೆಂದ-
" ಅವನು ಒಳ್ಳೆಯವ; ಯಾವಾಗಲೂ ಹಾಗೆಯೇ ಏನಾದರೊಂದು 'ಬಿಟ್ಟಿ' ಇದ್ದೇ ಇರುತ್ತದೆ; ಕಳೆದ ಬಾರಿ ಮಾವಿನ ಲಸ್ಸಿ ಸಾಬಿಸು[=ಸರ್ವಿಸ್; ಉಚಿತ]" ಎಂದ.

"ಪರವಾಗಿಲ್ಲವೇ, ಅಷ್ಟು ಒಳ್ಳೇ ಬುದ್ಧಿಯೇ?" ಎಂದೆ.

"ಭಾರತೀಯರಿಗೆ ಮಾತ್ರ ಕಣಯ್ಯಾ ಶಾಸ್ತ್ರೀ" ಎಂದ ವರ್ಣೇಕರ್.

ಅಷ್ಟರಲ್ಲಿ ಬಂತು ತೇಗು!! ನಾ ತಿಂದ 'ನಾನು' ಕೆಲಸ ಶುರು ಮಾಡಿತ್ತು! ಜೊತೆಗೆ ಒಳ್ಳೆಯ ವಿಚಾರವೊಂದು ನನ್ನ ತಲೆಯೊಳಗೇ ಮಥಿಸತೊಡಗಿತ್ತು!! ಮೆಟ್ಟಿಲಿಳಿದು ಬರುತ್ತಾ ತಿರುಗಿ ನೋಡಿ. . "ಸಂತಾನ. . ಹ್ಂ. . ಒಳ್ಳೆಯ ಜಾಗ ನನ್ನ ವಿಚಾರ ವಿನಿಮಯಕ್ಕೆ " ಎಂದುಕೊಂಡೆ.


ಅಂದಿನಿಂದ ಶುರುವಾಯಿತು ನನ್ನ 'ಸಂತಾನ'ದ ಸಂಬಂಧ!! ಪ್ರತಿ ಶನಿವಾರ ನಾನು ಹಾಜರ್. ನನಗಾಗಿ ಜಪಾನೀ ಮಿತ್ರರೂ ಹಾಜರ್. ಮಧ್ಯೆ ನಿಂತವ ಕುನ್ನ! ನಿಜವಾಗಿ ನನಗೆ ಬೇಕಾಗಿದ್ದುದು, ಜಪಾನೀ ಭಾಷೆಯಲ್ಲಿ ಸಂಭಾಷಣೆ. ಜಪಾನಿನ ವಿವಿಧ ಕೋನಗಳ ವಿಶ್ಲೇಷಣೆ! ಅದಕ್ಕಾಗಿ ಜಪಾನೀ ಮಿತ್ರರ ಅನ್ವೇಷಣೆ! ನನಗೆ ಬೇಕಿದ್ದುದು ನಾ ಹೇಳಿದ್ದಕ್ಕೆ ತಲೆಯಾಡಿಸುವ, ಹೆದರುವ ಕಕ್ಷಿದಾರರಲ್ಲ!! ನಾ ಹೇಳಿದ ಭವಿಷ್ಯಕ್ಕೆ ಬೆಕ್ಕಸ ಬೆರಗಾಗುವವರೂ ಅಲ್ಲ! ನಿಜವಾಗಿ 'ಸತ್ತುಹೋದ' ಜಪಾನೀಯತೆಯ ಬೇರನ್ನು ಮತ್ತೆ ಚಿಗುರಿಸಬಲ್ಲವರು!! ಅದಕ್ಕೆ ಅವರಿಗರ್ಥವಾಗುವಂತೆ ಮಾಡಲು ನಾ ಬಳಸಿಕೊಂಡ ಅದ್ಭುತ ಅಸ್ತ್ರ ಜ್ಯೋತಿಷಶಾಸ್ತ್ರ! ಇರಲಿ ನಾನೇನೂ ಸುಳ್ಳು ಹೇಳುವುದಿಲ್ಲ ಬಿಡಿ; ಅದು ನನ್ನ ಧರ್ಮಕ್ಕೆ ವಿರುದ್ಧ! ಅವರನ್ನು 'ಅತಿ ಅಮೆರಿಕೀಕರಣ' ದಿಂದ ಜಪಾನೀಯತೆಗೆ ಹಿಂದೆಳೆಯಲು ಒಂದು ಯಕ್ಷಿಣಿಯಂತಹ ವಿದ್ಯೆ ಅವಶ್ಯವೆಂದು ನಾ ಬಲ್ಲೆ! ನನಗೆ ಗೊತ್ತಿದ್ದ ವಿದ್ಯೆಯನ್ನು ಅವರೆಲ್ಲರ ಸಂತೋಷಕ್ಕೆ ಬಳಸಿದೆ!

ನಾ ಎಡವಲಿಲ್ಲ! ಕಾದಿತ್ತು ಅತ್ಯದ್ಭುತ ಯಶಸ್ಸು! ಜಪಾನೀಯತೆಯ ಚಿಗುರಿಗೆ ಭಾರತದ ನೀರೆರೆದೆ! ಆಗಲೂ, ಈಗಲೂ ಮನಸ್ಸಿನಲ್ಲಿ ಒಂದೇ - "ನೀನೊಲಿದರೆ ಕೊರಡು ಕೊನರುವುದಯ್ಯಾ . . . !"

(ಮುಂದಿನ ಬಾರಿ: ೧೩. ಸಂತೆಯಲ್ಲಿ ನಾ ಸಂತ!)

Saturday, February 17, 2007

೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ

ನನ್ನ ಜಪಾನ್ ಪ್ರವಾಸ: ೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ



ಹೆಸರಲ್ಲೇನಿದೆ? ಎನ್ನುವವರಿರಬಹುದು; ಹೆಸರಲ್ಲೇ ಎಲ್ಲವೂ ಅಡಗಿದೆ ಎನ್ನುವವರೂ ಇರಬಹುದು. ಜಪಾನೀಯರ ಹೆಸರಿನಲ್ಲಿ ನನಗೆ ಮಾತ್ರ ನಗುವಿದೆ! ಹೆಸರು ಆಯಾ ಭಾಷೆಯ, ಪ್ರದೇಶದ ವೈಶಿಷ್ಟ್ಯ; ಅದರಲ್ಲಿ ಅಪಹಾಸ್ಯ ಮಾಡುವುದು ಸರಿಯಲ್ಲ ಎನ್ನುವಿರೇನೋ. ಅಪಹಾಸ್ಯಕ್ಕಲ್ಲವಾದರೂ, ಕೆಲವೊಮ್ಮೆ ಕೆಲವು ಹೆಸರುಗಳನ್ನು ಕೇಳಿದೊಡನೆ ಅದರರ್ಥ ಕನ್ನಡದಲ್ಲಿ ಚಕ್ಕನೆ ಹೊಳೆದು ನಾಭಿಯಿಂದ ನಗೆಯುಕ್ಕಿಬರುತ್ತದೆ. ನದಿ ಮೂಲ, ಋಷಿ ಮೂಲ ಕೆದಕಬಾರದು; ಜಪಾನೀ ಹೆಸರಿನ ಅರ್ಥ ಹುಡುಕಬಾರದು ಅನ್ನುವುದು ನನಗೆ ಗೊತ್ತಿತ್ತು. ದಕ್ಷಿಣ-ಉತ್ತರ ಭಾರತದವರಿಗೇ ಪರಸ್ಪರ ನಗೆ ತರಿಸುವ ಭಾರತೀಯ ಹೆಸರುಗಳಿರುವಾಗ, ನನ್ನ ನಗೆಯ ಬಗೆಗೆ ಅಚ್ಚರಿಯೇನಿಲ್ಲ ಬಿಡಿ. ಮೊದಲ ಬಾರಿ ಬಸಪ್ಪ ಉಳ್ಳಾಗಡ್ಡಿ, ಶರಣಪ್ಪ ಮೆಣಸಿನಕಾಯಿ ಎಂದೆಲ್ಲ ಕೇಳಿದಾಗ ಬಿದ್ದು ಬಿದ್ದು ನಕ್ಕಿದ್ದೆ! ತರಕಾರಿಯ ಹೆಸರನ್ನು ಕುಟುಂಬ ನಾಮಧೇಯವಾಗಿ ಬಳಸುವ ಜನವಿದ್ದಾರೆಂದು ನನಗೆ ತಿಳಿದದ್ದೇ ಆಗ! ಆದರೆ ಅದರ ಹಿನ್ನೆಲೆಯನ್ನು ಹುಡುಕುವ ಮನಸ್ಸಾಗಿದ್ದು ಜಪಾನೀ ಹೆಸರುಗಳ ಹಿನ್ನೆಲೆ ತಿಳಿಯಲಾರಂಭಿಸಿದ ನಂತರ. ಏಕೆಂದರೆ ಜಪಾನೀ ಹೆಸರುಗಳೂ ಕನ್ನಡದಲ್ಲಿ 'ಕಲ್ಲುಬಾವಿ', 'ಕರಿಮರ', 'ದೊಡ್ಡಬಯಲು', 'ಎದುರುಗದ್ದೆ' ಇತ್ಯಾದಿ ಬೇಸಾಯ ಸಮುದಾಯದ ಹೆಸರುಗಳೇ!


ಜಪಾನೀಯರ ಹೆಸರಿನಲ್ಲಿ ಎರಡು ಭಾಗಗಳಿವೆ: ಕುಟುಂಬನಾಮ ಹಾಗೂ ನಿಜನಾಮ. ಕುಟುಂಬನಾಮ ಬಹುಶಃ ಕೃಷಿಕ ಸಮುದಾಯದ, ನಿಸರ್ಗದ ನಡುವಿನ ಅಥವಾ ಬೆಸ್ತ ಸಮುದಾಯದ ಹಿನ್ನೆಲೆ ಹೊಂದಿದ ಹೆಸರುಗಳು. ನಿಜನಾಮ ಅವರವರ ಸ್ವಂತ ಹೆಸರುಗಳು. ತನಕ, ಯಮದ, ತೊಯೊತ, ಮತ್ಸುದ, ಹೊಂದ, ಕವಸಕಿ ಇವೆಲ್ಲ ಕುಟುಂಬನಾಮಗಳು; ಹರುಒ, ಮಸತೊ, ತತ್ಸುಜಿ ಇತ್ಯಾದಿ ಗಂಡಸರ ಹೆಸರಾದರೆ ನತ್ಸುಎ, ಜುಂಕೊ, ಸೆತ್ಸುಕೊ ಇತ್ಯಾದಿ ಹೆಂಗಸರ ಹೆಸರುಗಳು. ಎವೆರೆಸ್ಟ್ ಶಿಖರವನ್ನೇರಿದ ಮೊದಲ ಮಹಿಳೆ ಜಪಾನಿನ 'ಜುಂಕೊ ತಬಿ' ಯಲ್ಲಿ ಜುಂಕೊ(=ಸುಕನ್ಯಾ) ಆಕೆಯ ಹೆಸರು; 'ತಬಿ'(=ಪ್ರವಾಸ) ಕುಟುಂಬನಾಮ. ಸಾಮಾನ್ಯವಾಗಿ ಎಲ್ಲರೂ ಕುಟುಂಬನಾಮವನ್ನೇ ಇಲ್ಲಿ ಬಳಸುವುದು, ವ್ಯವಹರಿಸುವುದು. ಸ್ಥಳದ ಹೆಸರೂ ಕುಟುಂಬನಾಮದಂತೆಯೇ ಇರುತ್ತದೆಯಾದ್ದರಿಂದ, ಹೆಸರಿಗೆ ಪ್ರಾದೇಶಿಕ ಸೊಗಡೂ ಇದೆ. ತೊಯೊತ ಎಂದರೆ 'ಫಲವತ್ತಾದ ಗದ್ದೆ', ಮತ್ಸುಶಿತ ಎಂದರೆ 'ಪೈನ್‍ಮರದ ಕೆಳಗೆ', ಕವಸಕಿ ಎಂದರೆ 'ನದಿಯ ಮುಂದೆ', ಸುಝುಕಿ ಎಂದರೆ 'ಗಂಟೆಮರ' ಇತ್ಯಾದಿ ಇತ್ಯಾದಿ.


ಇವೆಲ್ಲ ನಿಸರ್ಗದೊಸಗೆಯ ಹೆಸರುಗಳಾದ್ದರಿಂದ, ತಮಾಷೆಯೇನೂ ಇಲ್ಲ; ಆದರೆ 'ಓಜಿರಿ'(ದೊಡ್ಡಕುಂಡಿ), 'ಓಯ'(ದೊಡ್ಡಬಾಣ), 'ನೀಹೊರಿ'(ಹೊಸಹಳ್ಳ), 'ಕೊಇಝುಮಿ'(ಸಣ್ಣಬುಗ್ಗೆ) ಎಂಬ ಹೆಸರುಗಳ ಅರ್ಥ ಫಕ್ಕನೆ ಹೊಳೆದು, ಆ ವ್ಯಕ್ತಿಗಳ ಮುಖದೊಂದಿಗೆ ಕಲ್ಪಿಸಿಕೊಳ್ಳುತ್ತಲೇ ಅದೇಕೋ ನಗೆ ಕಾರಂಜಿಯಂತೆ ಚಿಮ್ಮಿಬರುತ್ತಿತ್ತು; ಈಗ ಅಭ್ಯಾಸವಾಗಿಹೋಗಿದೆಯೆನ್ನಿ. ಕೆಲವೊಮ್ಮೆ ಕೆಲವು ಹೆಸರುಗಳ ಅರ್ಥ ಹೊಳೆಯುವ ಮೊದಲೇ ಅದರ ಯಮಕ-ಪ್ರಾಸಗಳ ಸದ್ದಿಗೇ ನಗೆಯುಕ್ಕಿಬರುತ್ತಿತ್ತು. 'ಅಸಕುಸ'ದ ದೇಗುಲಕ್ಕೋ, 'ಅಕಸಕ'ದ ರಾಜಭವನಕ್ಕೋ ಹೋಗಿಬಂದೆವೆಂದು ಮನೆಯವರಿಗೆ ದೂರವಾಣಿ ಕರೆಮಾಡಿದಾಗ ಹೇಳಿದರೆ, ಆ ಹೆಸರು ಕೇಳಿಯೇ ಮನೆಯವರು ಎರಡು ನಿಮಿಷ ನಕ್ಕ ಉದಾಹರಣೆಯೂ ಇಲ್ಲದಿಲ್ಲ. ಎಲ್ಲಕ್ಕಿಂತ ನಗೆ ಬರಿಸಿದ್ದೆಂದರೆ ಜಪಾನ್ ರಾಜಕುಟುಂಬದ ಹೆಸರುಗಳು. ವಿಸ್ಮಯವೆಂದರೆ, ಎಷ್ಟೋ ಜಪಾನೀಯರಿಗೇ ಅವರ ಚಕ್ರವರ್ತಿಯ ಹೆಸರು ತಿಳಿದಿರುವುದಿಲ್ಲ! ನಾನೂ ನಿಮ್ಮಂತೆಯೇ ತಲೆಕೊಡವಿ, ಕುತೂಹಲದಿಂದ ಜಪಾನೀ ಯುವತಿಯೊಬ್ಬಳನ್ನು ಕೇಳಿಯೇಬಿಟ್ಟೆ:

"ನಿಮ್ಮ ಚಕ್ರವರ್ತಿಯ ಹೆಸರೇನು?"

"ಹೇಏಏಏಏಏ.... ಚಕ್ರವರ್ತಿಯ ಹೆಸರೇ? ಒಳ್ಳೆ ತಮಾಷೆ ಪ್ರಶ್ನೆ ಕೇಳಿದಿರಿ; ಚಕ್ರವರ್ತಿಗೆ ಹೆಸರೆಲ್ಲಿದೆ?" ಎನ್ನುತ್ತಾ ರಾಗ ತೆಗೆದವಳೇ, "ತೆನ್ನೋ ವ ತೆನ್ನೋ ದಯೊ! [=ಚಕ್ರವರ್ತಿ ಚಕ್ರವರ್ತಿಯೇ ಕಣ್ರೀ!]" ಎನ್ನುತ್ತಾ ತಿಪ್ಪೆ ಸಾರಿಸಿಬಿಟ್ಟಳು.


ಅವಳೇನೋ ಬಿಟ್ಟಳು; ನಾನು ಬಿಡಬೇಕಲ್ಲ! ಎಲ್ಲೆಲ್ಲೋ ಅಂತರ್ಜಾಲದಲ್ಲಿ ಹುಡುಕಿ ತೆಗೆದೆ. ಚಕ್ರವರ್ತಿಗೆ ಕುಟುಂಬನಾಮವಿದ್ದರೂ, ಆನುವಂಶಿಕವಾಗಿ ಆ ಕುಟುಂಬದವರೇ ಚಕ್ರವರ್ತಿಗಳಾಗುವುದರಿಂದ ಕುಟುಂಬನಾಮ 'ಚಕ್ರವರ್ತಿ' ಎಂದೇ ಪ್ರಸಿದ್ಧ! ಆದರೆ ಅವರ ನಿಜನಾಮ ಹಾಗೂ ರಾಜನಾಮ ಎರಡೂ ಇವೆ. ಚಕ್ರವರ್ತಿ 'ಹಿರೊಹಿತೊ' ನ ಮಗ 'ಅಕಿಹಿತೊ' ಎನ್ನುವಾಗಲಂತೂ ಗಿರಣಿಯಿಂದ ಅಕ್ಕಿ ಹಿಟ್ಟು ಉದುರುವ ಚಿತ್ರವೇ ಕಣ್ಣ ಮುಂದೆ ಮೂಡುತ್ತದೆ. ರಾಜಪುತ್ರನೂ ಹಿಟ್ಟೇ - 'ನರುಹಿತೊ'! ಎರಡನೇ ಸೊಸೆಯ ಹೆಸರು 'ಕಿಕೊ'; ಅವಳ ಇಬ್ಬರು ಹೆಣ್ಣು ಮಕ್ಕಳು - 'ಕಕೊ' ಮತ್ತು 'ಮಕೊ'! ಬಿದ್ದು ಬಿದ್ದೂ ನಕ್ಕೆ; ನೋಯುತಿದೆ ಪಕ್ಕೆ!




(ಜಪಾನ್ ಚಕ್ರವರ್ತಿಯ ವಂಶವೃಕ್ಷ - ವಿಕಿಪೀಡಿಯ ಕೃಪೆ)


ಸರಿ, ವಿಷಯಕ್ಕೆ ಬರೋಣ. ತಮ್ಮ ಹೆಸರುಗಳು ಹೀಗಿರುವುದು ಜಪಾನೀಯರಿಗೆ ತೊಂದರೆಯೇ ಅಲ್ಲ; ನಮ್ಮಲ್ಲಿ 'ರಾಮಪ್ಪ ದೊಡ್ಡೇರಿ' ಹೇಗೋ ಅಲ್ಲಿ 'ತರೋ ಇಕೆದ' ಹಾಗೆಯೇ. ಅಪ್ಪಿ ತಪ್ಪಿಯೂ ಅವರಿಗೆ 'ಮಧ್ಯನಾಮ' ಇರುವುದಿಲ್ಲ - ಹಣೆಯಲ್ಲಲ್ಲ - ಹೆಸರಲ್ಲಿ! ಆದ್ದರಿಂದ ಮಧ್ಯನಾಮದ ಬಗ್ಗೆ ಅವರಿಗೆ ತಿಳಿಸಿ ಹೇಳಲು ಸಾಕು ಸಾಕಾಯಿತು. 'ಚಿಕ್ಕನಾಯ್ಕನಹಳ್ಳಿ ಶಂಕರ ಬೆನಕ' ಎಂಬುದರಲ್ಲಿ ನನ್ನ ಹೆಸರಾವುದು ಎಂಬುದೇ ಜಪಾನೀಯರಿಗೆ ಸಮಸ್ಯೆ! ನನ್ನ ಮೇಲಧಿಕಾರಿಗೆ ಹೇಳುತ್ತಿದ್ದೆ:

"ಮೊದಲನೆಯದು ಹುಟ್ಟೂರಿನ ಹೆಸರು, ಎರಡನೆಯದು ತಂದೆಯ ಹೆಸರು, ಕೊನೆಯದು ನನ್ನದು" ಎಂದು ವಿವರಣೆ ನೀಡಿದೆ.

"ನಿಮ್ಮ ಹುಟ್ಟೂರು... ಚಿಕ್..ಚಿಕ... ಅದು ಯಾವುದಕ್ಕೆ ಪ್ರಸಿದ್ಧಿ?" ಕಣ್ಮುಂದೆ ಕರಟದ ಚಿತ್ರ ಸುಳಿದುಹೋಯಿತು.

"ಹುಟ್ಟೂರೆಂದರೆ ಹುಟ್ಟೂರಲ್ಲ..ನಮ್ಮ ಪೂರ್ವಿಕರಿದ್ದ ಊರಂತೆ...ಸದ್ಯಕ್ಕದೇ ಕುಟುಂಬನಾಮ" ಎಂದವನೇ " ಆದರೆ ಭಾರತದಲ್ಲೆಲ್ಲಾ ನಿಜನಾಮವನ್ನೇ ಕೂಗುವಾಗ ಬಳಸುವುದು" ಎಂದು ವಿವರಣೆ ಕೊಟ್ಟೆ.

"ನಮ್ಮಲ್ಲಿ ಒಬ್ಬರಿದ್ದಾರೆ ಆನಂದ ಕುಮಾರು...ಅವರಿಗೆ ಮಧ್ಯನಾಮ ಇಲ್ಲವಲ್ಲ....."

ತಲೆಕೆರೆದುಕೊಳ್ಳುತ್ತಾ, "ಭಾರತದಲ್ಲಿ ಒಂದು, ಎರಡು, ಮೂರು, ನಾಲ್ಕು..ಇನ್ನೂ ಬೇಕಾದಷ್ಟು ಪದಗಳಿರುವ ಹೆಸರುಗಳೂ ಇವೆ.."
ಅವನಿಗೆ ಅರ್ಥವಾಗಲಿಲ್ಲ; ಮಿಕಿಮಿಕಿ ನೋಡಿದ. ಮುಂದುವರೆಸಿದೆ "..ಅಂದರೆ ನಿಮ್ಮನ್ನು ಏನೆಂದು ಕರೆಯಬೇಕು ಎಂದು ಅವರನ್ನೇ ಕೇಳಿಬಿಡುವುದು ಉತ್ತಮ"

"ಓ! ಹಾಗೋ! ಸರಿ ಸರಿ.. ನಿಮ್ಮನ್ನು ಬೆನಕ ಎನ್ನಲೇ? ಕುಟುಂಬನಾಮವಿದ್ದರೆ ಚೆನ್ನಿತ್ತು..."

"ಸದ್ಯ ಅಷ್ಟು ಮಾಡಿ ಪುಣ್ಯ ಕಟ್ಟಿಕೋ ತಂದೇ! ವಿಮಾನದ ಆರೋಹಣಪತ್ರದಲ್ಲಿ ಪ್ರತಿಬಾರಿ ನನ್ನ ಹೆಸರು ಚಿಕ್ನಾಯ್ಕನಹಳ್ಳಿ ಅಂತ ಓದಿ ಓದಿ ಸಾಕಾಗಿದೆ" ಗೊಣಗಿಕೊಂಡೆ.


ಅಷ್ಟರಲ್ಲಿ ಅದೆಲ್ಲಿದ್ದನೋ ನನ್ನ ಸಹೋದ್ಯೋಗಿ ವೆರ್ಣೇಕರ ಮುಸಿಮುಸಿ ನಗುತ್ತಾ ಬಂದವನೇ ಮಧ್ಯ ಬಾಯಿ ಹಾಕಿದ:

"ನೀವು ಇವನ ಕುಟುಂಬನಾಮ ಕೇಳಿದಿರಿ ಅಲ್ಲವೇ - ನಾವೆಲ್ಲ ಶಾಸ್ತ್ರೀ ಎನ್ನುತ್ತೇವೆ" ಎಂದ. ನಾನು ತಲೆದೂಗಿ ನಸುನಕ್ಕೆ.

"ಶಸು..ತೊರಿ?.." 'ಚಿಕ್ನಾಯ್ಕನಹಳ್ಳಿ'ಗಿಂತ ಚಿಕ್ಕದಾದರೂ ಬಾಯಿ ಹೊರಳಲಿಲ್ಲ. ಕಷ್ಟಪಟ್ಟು ಅಭ್ಯಾಸ ಮಾಡಿಕೊಂಡ! ಅಂತೂ ಧರ್ಮರಹಿತ ನಾಡಿನಲ್ಲಿ ನನ್ನನ್ನು ಎಲ್ಲರೂ 'ಶಾಸ್ತ್ರೀ' ಎನ್ನುವಂತೆ ಮಾಡಿಬಿಟ್ಟ ವೆರ್ಣೇಕರ. ಅವನಿಟ್ಟ ಹೆಸರೇ ಉಳಿದುಕೊಂಡಿತು! ಸಾಲದ್ದಕ್ಕೆ ನಾನು ಜ್ಯೋತಿಷಿಯೆಂದೂ ಎಲ್ಲರಿಗೆ ಹೇಳಿಕೊಂಡೂ ಬಂದ! ಅವನು ಹೇಳಿದ್ದಷ್ಟೇ ಬಂತು! ಧರ್ಮಕ್ಕೇ ಬೆಲೆಯಿಲ್ಲದ ಈ ನವೀನ ನಾಡಿನಲ್ಲಿ ನನ್ನ ಪಂಚಾಂಗಕ್ಕೆ ಕೆಲಸವಿದೆಯೇ? ನಿಟ್ಟುಸಿರಿಟ್ಟೆ.


(ಮುಂದಿನ ಬಾರಿ: ೧೨. ನಾ ತಿಂದ ನಾನು)

Saturday, December 16, 2006

೧೦.ರೈಲಿನ ರಾಜ್ಯ

ನನ್ನ ಜಪಾನ್ ಪ್ರವಾಸ - ೧೦.ರೈಲಿನ ರಾಜ್ಯ
------------------------------------------

ದೊಂತೊನ್ ಗೊತ್ತೊನ್, ಗಾಂತೊನ್ ಗೊತ್ತೊನ್, ಗತಾಂಗೊತೊನ್ ... ಇದೇನಿದು ಜಪಾನೀಭಾಷೆಯಲ್ಲೇನೋ ಬಡಬಡಿಸುತ್ತಿದ್ದೇನೆ ಎಂದುಕೊಳ್ಳಬೇಡಿ; ಇವೆಲ್ಲ ಇಲ್ಲಿಯ ಜನರು ರೈಲಿನ ಸದ್ದನ್ನು ಅನುಕರಿಸುವ ಬಗೆ ಅಷ್ಟೇ! ನಮ್ಮಲ್ಲಾದರೋ ಈಗಲೂ ಕೂಡ ಮಕ್ಕಳಾಗಲಿ, ದೊಡ್ಡವರಾಗಲಿ, ಹಳಿಬಂಡಿಯ ಸದ್ದನ್ನು ಚುಕುಪುಕು-ಚುಕುಬುಕು-ಚುಕ್‍ಬುಕ್ (ಡುಂಡಿರಾಜರಂತೆ ವಾಣಿಜ್ಯದವರಿಗಾದರೆ ಚೆಕ್‍ಬುಕ್ ಚೆಕ್‍ಬುಕ್)-ಇತ್ಯಾದಿಗಳಿಂದ ಅನುಕರಿಸುವುದನ್ನು ಕೇಳಿದ್ದೇನೆ. ಅದು ಉಗಿಬಂಡಿಯ ಕಾಲ, ಈಗೆಲ್ಲ ಡೀಸೆಲ್ ಗಾಡಿ - ಧಡಕ್ ಧಡಕ್ ಅಲ್ಲವೇನ್ರೀ? ಎನ್ನುವಿರೇನೋ! ನಾನು ಹೇಳಹೊರಟಿದ್ದು ಇನ್ನೂ ಮುಂದುವರೆದ ವಿದ್ಯುತ್ ಹಳಿಬಂಡಿಯ ಬಗ್ಗೆ; ಏನೇ ಆಗಲಿ, ಸದ್ದು "ಗಾಂತೊನ್ ಗೊತ್ತೊನ್" ಎಂದೇನೂ ನನಗೆ ಕೇಳಿಸಲಿಲ್ಲ. ಶಬ್ದ-ಭಾಷೆ ಆಯಾ ಪ್ರದೇಶದ ವೈಶಿಷ್ಟ್ಯ; ರೈಲು ಚುಕುಪುಕು ಎನ್ನುತ್ತದೆ ಎಂದರೆ ಇವರು ಫಕಫಕನೆ ನಕ್ಕಾರು! ಸರಿ, ಶಬ್ದವೇ ಇಲ್ಲದೆ ರೈಲು ಚಲಿಸಿದರೆ? ಬಿದ್ದು ಬಿದ್ದು ನಕ್ಕೀರಿ? ಅದು ರೈಲೇ ಅಲ್ಲ; ನೀನು ಬಿಡ್ತಾ ಇರೋದೇ ರೈಲು ಅಂತ!? ಖಂಡಿತ ಇಲ್ರೀ! ಇಲ್ಲಿ ನಾವು ತಿಳಿಯಬೇಕಿರುವ ಸತ್ಯ ಬಹಳಷ್ಟಿದೆ; ಇದನ್ನೇ ನಾನೀಗ ಹೇಳಹೊರಟಿದ್ದು - ಜಪಾನೆಂದರೆ ರೈಲಿನ ರಾಜ್ಯ!


ಜಪಾನಿನಲ್ಲಿ ಬಸ್ಸಿಗಿಂತ ಹಳಿಬಂಡಿಯ ಸಾರಿಗೆ ವ್ಯವಸ್ಥೆ ಅತ್ಯುತ್ತಮವಾಗಿದೆ; ಬಸ್ಸೇನೂ ಕಡಿಮೆಯಿಲ್ಲ ಆದರೂ ಶ್ರೀಸಾಮಾನ್ಯ ಮಾತೆತ್ತಿದರೆ ದೆನ್‍ಶ[=ವಿದ್ಯುದ್ರಥ, ಹಳಿಬಂಡಿ], ಎಕಿ[=ನಿಲ್ದಾಣ] ಎನ್ನುವಷ್ಟು ತೀರಾ ನಿಕಟವಾಗಿರುವುದು ರೈಲು ಮಾತ್ರ. ಒಂದೊಂದೂರನ್ನೂ ರೈಲಿನ ಸಂಸ್ಥೆಗಳು ಜಹಗೀರಿ ತೆಗೆದುಕೊಂಡಿರುವಂತೆ ಕಾಣುತ್ತದೆ! ಊರಿನ ಹೆಸರು ಹೇಳಿದರೆ, "ಆ ರೈಲು ಸಂಸ್ಥೆಯ ಊರೇ? ಈ ರೈಲಿನ ಊರೇ?" ಎನ್ನುವಷ್ಟು ಪ್ರಸಿದ್ಧ ಈ ರೈಲುಗಳು! ಎಕಿಗಳು ನಗರದಲ್ಲಿ ೧-೨ ಕಿ.ಮೀ. ಅಂತರದಲ್ಲಿದ್ದು, ಹೊರವಲಯದಲ್ಲಿ ೫ ಕಿ.ಮೀ. ಸುಮಾರಿಗೆ ಕಾಣಸಿಗುತ್ತವೆ; ಎಕಿ ಇದ್ದಲ್ಲೆಲ್ಲ ವ್ಯಾಪಾರೀ ಕೇಂದ್ರಗಳೂ, ಊಟೋಪಚಾರ ಕೇಂದ್ರಗಳೂ, ವಸತಿಗಳ ತಾಣಗಳೂ ಬೆಳೆದೂ ಬೆಳೆದೂ, ಇಲ್ಲಿ ' ಹಳ್ಳಿ'ಗಳೇ ಇಲ್ಲವಾಗಿ, ಇಲ್ಲಿನ 'ಹಳ್ಳಿಗಳು' ಭಾರತದ ನಗರಗಳನ್ನು ಹೋಲುತ್ತವೆ! ಅಂದರೆ ಜಪಾನಿನ ಹಳ್ಳಿ ಎಂಬುದು ಮಹಾನಗರದಿಂದ ಅತಿದೂರದಲ್ಲಿದ್ದು, ಬೆಟ್ಟಗುಡ್ಡಗಳ ನಡುವೆ, ತೋಟ-ಗದ್ದೆಗಳಿಂದ ತುಂಬಿದ ಜನನಿಬಿಡವಾಗಿರದ ನಗರವೇ! ಅದೇನೇ ಇರಲಿ, ವಸತಿ ಸೌಕರ್ಯಕ್ಕೆ ಮಾತ್ರ ಎಕಿಯಿಂದ ಮನೆ ಎಷ್ಟು ದೂರದಲ್ಲಿರುವುದೋ ಅಷ್ಟು ಬಾಡಿಗೆ ಕಡಿಮೆಯಾಗಿರುತ್ತದೆ; ಸ್ವಾಭಾವಿಕವಲ್ಲವೇ?

ಆದರೆ 'ಎಕಿಯಿಂದ ೧೦ ನಿಮಿಷ ನಡಿಗೆ - ೮೫೦೦೦ಯೆನ್ -೨ಎಲ್.ಡಿ.ಕೆ' ಎಂದು ದಪ್ಪಕ್ಷರದಲ್ಲಿ ಬರೆಯಲ್ಪಟ್ಟ ಫಲಕಗಳು ಭಾರತದಲ್ಲಿನ್ನೂ ಇಲ್ಲವೇನೋ! ಬೆಲೆ ಕ್ರಯಕ್ಕಲ್ಲ ಸ್ವಾಮೀ, ತಿಂಗಳ ಬಾಡಿಗೆಗೆ! ಎಚ್ಚರವಿರಲಿ! ೨ ಎಲ್.ಡಿ.ಕೆ ಎಂದರೆ ೨ ಕೋಣೆಗಳೂ, ಎಲ್-ಲಿವಿಂಗ್-ನಡುವಂಗಳವೂ, ಡಿ-ಡೈನಿಂಗ್-ಊಟದಕೋಣೆಯೂ, ಕೆ-ಕಿಚನ್-ಅಡುಗೆಮನೆಯೂ ಇದೆ ಎಂದರ್ಥ. ಅದರ ಇನ್ನೊಂದರ್ಥ ಇವುಗಳಾವುವೂ ಇಲ್ಲದ 'ಮನೆ'ಯೂ ಇದೆ ಎಂದಲ್ಲವೇ? ಖಂಡಿತ ಇದೆ; ನಾನು ವಾಸವಿರುವುದು ಅದರಲ್ಲೇ! ಹೌದು ಸ್ವಾಮೀ, ಕ್ಯೂಶೂವಿನಿಂದ ಮರಳಿದ ನಂತರ ಓಸಾಕಾದ ನನ್ನ ಅದೇ ಕೋಣೆ/ಮನೆಯಲ್ಲಿಯೇ ನನ್ನ ಬಿಡಾರ; ವ್ಯತ್ಯಾಸವೆಂದರೆ - ವೆಂಕಟ ಇರಲಿಲ್ಲ.


ಕ್ಯೂಶೂವಿನಿಂದ ಹಿಂದಿರುಗಿದ್ದೂ ಶಿನ್‍ಕಾನ್‍ಸೆನ್ ರೈಲಿನಲ್ಲಿಯೇ - ಶರವೇಗದ ಹಳಿಬಂಡಿ! ನಾ ಮೊದಲೇ ಹೇಳಿದಂತೆ, ಬೆಂಗಳೂರಿನಿಂದ ಅತಿವೇಗದ ಬಸ್ಸು ಮೈಸೂರು ತಲುಪುವುದರೊಳಗೆ, ಶಿನ್‍ಕಾನ್‍ಸೆನ್ ಓಸಾಕಾದಿಂದ ತೋಕ್ಯೋ ತಲುಪಿರುತ್ತದೆ. ನೊಝೊಮಿ, ಹಿಕಾರಿ, ಕೊದಾಮ ಗಳು ಕ್ರಮವಾಗಿ ಗಂಟೆಗೆ ೨೫೦, ೨೦೦, ೧೫೦ ಕಿ.ಮೀ. ವೇಗದಲ್ಲಿ ಓಡುತ್ತವೆ; ಅಲ್ಲಲ್ಲ ಹಾರುತ್ತವೆ! ಶರವೇಗದ ಈ ರೈಲುಗಳು ಇಲ್ಲಿನ ಮುಖ್ಯನಗರಗಳನ್ನು, ಕೆನ್[=ರಾಜ್ಯ]ಗಳ ರಾಜಧಾನಿಗಳನ್ನು ಕ್ಷಣಾರ್ಧದಲ್ಲಿ ಬೆಸೆಯುತ್ತವೆ. ಒಂದು ಕೆನ್ ನ ಒಳಗೇ ಚಲಿಸುವ ರೈಲುಗಳ ಸಂಸ್ಥೆಗಳು ಹಲವಾರಿವೆ. ಏನೇ ಆದರೂ ರೈಲುಗಳನ್ನು ನುಗ್ಗಿಬಿಡುವ ಸಂಸ್ಥೆಗಳಲ್ಲಿ ಎದ್ದು ಕಾಣುವುದು - ಜೆ.ಆರ್ - ಜಪಾನ್ ರೈಲ್ವೆ - ಸರ್ಕಾರೀ ಭಾಗೀದಾರ ಸಂಸ್ಥೆ; ಶಿನ್‍ಕಾನ್‍ಸೆನ್ ಗಳ ಜನಕ; ಇಡೀ ಜಪಾನಿನ ನರನಾಡಿಗಳಿಗೆ ಆಮ್ಲಜನಕ! ಸಣ್ಣ-ಪುಟ್ಟ ನಗರ, ಪಟ್ಟಣಗಳನ್ನು ಸೇರಿಸುವ ಇತರ ಸಂಸ್ಥೆಗಳಲ್ಲಿ ಕಿನ್‍ತೆತ್ಸು, ಹಾನ್‍ಕ್ಯೂ, ಹಾನ್‍ಶಿನ್, ಕಿತಕ್ಯೂ, ನಾನ್‍ಕಯ್, ಮೆಯ್‍ತೆತ್ಸು, ಕೇಯೋ, ತೋಬು...ಇತ್ಯಾದಿ ಇತ್ಯಾದಿ. ಒಂದೇ ಎರಡೇ? ನೂರಾರು! ನನಗೇನು, ಇಲ್ಲಿಯವರಿಗೇ ಗೊತ್ತಿಲ್ಲದಿದ್ದರೂ ಅಚ್ಚರಿಯಿಲ್ಲ; ಅಷ್ಟು ಹೇರಳವಾಗಿವೆ. ನಗರದಲ್ಲಿ ಪಾತಾಳಗಾಮಿ ಸುರಂಗರೈಲುಗಳಿದ್ದು, ಭೂತಲಗಾಮೀ ರೈಲುನಿಲ್ದಾಣಗಳನ್ನು ಪಾತಾಳದಲ್ಲಿ ಸಂಧಿಸುತ್ತವೆ! ಹಾಗಾಗಿ, ಒಂದು ಪ್ರಮುಖ ರೈಲು ನಿಲ್ದಾಣ ಒಂದು ಚದರ ಕಿ.ಮೀ. ವಿಸ್ತೀರ್ಣ ಮೀರಿದ್ದರೂ ಹೆಚ್ಚಿಲ್ಲ! ಅಲ್ಲಿ ಬಹು ರೈಲುಗಳು ಸೇರುವುದರಿಂದ ನಿಲ್ದಾಣವೇ ೮-೧೦ ಅಂತಸ್ತುಗಳಿದ್ದು ಸುರಂಗ-ಭೂ-ಸೇತು ಹಳಿಬಂಡಿಗಳ ನಿಲ್ದಾಣಗಳು, ಅವುಗಳ ನಡುವೆ ಕೂಡು ದಾರಿಗಳು, ಪ್ರವೇಶಚೀಟಿ ಮಾರಾಟ-ಪರೀಕ್ಷಾ ಯಂತ್ರಗಳೂ, ಹತ್ತು ಹಲವು ದ್ವಾರಗಳು ಅಲ್ಲೇ ಇರುವುದು ಗೊತ್ತಿರುವುದೇ! ಸಾಲದ್ದಕ್ಕೆ ಆ ಪಾತಾಳದ ಅಂತಸ್ತಿನಿಂದ ಮೇಲುಪ್ಪರಿಗೆಯವರೆಗೂ ಅಂಗಡಿಗಳು, ಭವ್ಯ ಮಾರುಕಟ್ಟೆಗಳೂ, ಊಟೋಪಚಾರ ಮಳಿಗೆಗಳೂ, ಬೃಹತ್ಕಛೇರಿಗಳೂ, ವಸತಿಗೃಹಗಳೂ ಇವೆ!

ಪಾತಾಳಲೋಕವೆಂದರೆ ಏನೆಂದು ನನಗೆ ತಿಳಿದದ್ದು ಇಲ್ಲಿಯೇ - ಜಪಾನಿನ ಚಿಕತೆತ್ಸು[=ಸುರಂಗರೈಲು] 'ಹತ್ತಲು' ನಿಲ್ದಾಣಕ್ಕೆ 'ಇಳಿ'ದಾಗ! ಇದಾವ ಅಚ್ಚರಿಯ ಪರಿವೆಯಿಲ್ಲದಂತೆ ಜನ ಅವರಪಾಡಿಗೆ ಪ್ರತಿದಿನ ಪಯಣಿಸುತ್ತಾರೆ; ಅವರಿಗೆ ಇವೆಲ್ಲ ರೂಢಿಯಾಗಿಬಿಟ್ಟಿದೆ. ಅಚ್ಚರಿಯೇನಿದ್ದರೂ ನೆಲದೊಳಗೇ ಮೂರಂತಸ್ತು ಕೆಳಗೆ ನಿರಾತಂಕ ಜೀವಿ, ಜೀವನವನ್ನು ಕಂಡ ನನಗೆ! ನಿಜವಾಗಿ ಜಪಾನನ್ನು ಇಲ್ಲಿ ಮೆಚ್ಚಬೇಕು! ೧೫ ನಿಮಿಷಕ್ಕೊಮ್ಮೆ ಶರವೇಗದ ರೈಲು; ೫-೬ ನಿಮಿಷಕ್ಕೊಂದು ಸಾಮಾನ್ಯ ರೈಲು; ೧೫ ನಿಮಿಷಕ್ಕೊಂದು ವೇಗದ ರೈಲು; ೨೦ ನಿಮಿಷಕ್ಕೊಂದು ಅತಿವೇಗದ ರೈಲು; ಅರ್ಧಗಂಟೆಗೊಂದು ಕಾದಿರಿಸಿದ ವಿಶೇಷ ರೈಲು! ಬೆಳಿಗ್ಗೆ ೫:೩೦ ಯಿಂದ ರಾತ್ರಿ ೧೨ ರವರೆಗೆ ನಿರಾಯಾಸವಾಗಿ ಓಡುತ್ತವೆ! ಭಲಾ! ಭೇಷ್! ಸಾರಿಗೆ ವ್ಯವಸ್ಥೆಯೆಂದರೆ ಇದು! ನೀವೆಲ್ಲೇ ಇರಿ; ೧೦ ನಿಮಿಷಕ್ಕಿಂತ ಹೆಚ್ಚು ಕಾಯಬೇಕಿಲ್ಲ! ನಿಗದಿಯಾದ ಸಮಯಕ್ಕೆ ಸರಿಯಾಗಿ ರೈಲು ಬಂದೇ ಬರುತ್ತದೆ; ಶತಸ್ಸಿದ್ಧ! ಇಡೀ ದೇಶವೇ ವಿರಮಿಸುವ ಶನಿ-ಭಾನುವಾರ ವಿಶೇಷ ವೇಳಾಪಟ್ಟಿಯಾದರೂ, ಬೆಳಿಗ್ಗೆ ೬ ರಿಂದ ರಾತ್ರಿ ೧೨ ರವರೆಗೂ ಓಡಾಟಕ್ಕೆ ಯಾವ ತೊಂದರೆಯೂ ಆಗದು. ಜನದಟ್ಟಣೆಯ ಸಮಯದಲ್ಲಿ ೨ ನಿಮಿಷಕ್ಕೊಂದು ರೈಲಿದೆ! ನಿಲ್ದಾಣದಲ್ಲಿ ರೈಲು ನಿಲ್ಲುವುದು ಅರ್ಧ ನಿಮಿಷ ಮಾತ್ರ!


ಅತ್ಯದ್ಭುತ! ವೇಗದ ವಿಸ್ಮಯ! ಸಮಯಪಾಲನೆಯ ಅತ್ಯುತ್ತಮ ಉದಾಹರಣೆ! ಸುರಕ್ಷತೆಯ ಮೆರಗು! ಜಪಾನ್ ಹಳಿಬಂಡಿಯಷ್ಟೇ ಅಲ್ಲ; ಇಡೀ ಭೂಸಾರಿಗೆ ವ್ಯವಸ್ಥೆಯ ಅತ್ಯುತ್ತಮ ದೇಶ! ರೈಲಿನ ಕಥೆ ಮುಗಿಯುವುದೇ ಇಲ್ಲ ಬಿಡಿ! ಇಲ್ಲಿನ 'ಮೊನೊರೈಲ್' ಒಂದೇ ಹಳಿಯ ಮೇಲೆ ವಿದ್ಯುತ್ಕಾಂತೀಯ ಬಲದಿಂದೋಡುವ ಗಿನ್ನೆಸ್ ದಾಖಲೆಯ ಹಳಿಬಂಡಿ! ಇದು ಚಲಿಸುವಾಗ ಸದ್ದೇ ಕೇಳಿಸದು! ಕೇಬಲ್ ರೈಲಿನಲ್ಲಿ ಚಾಲಕನೇ ಇರುವುದಿಲ್ಲ; ಸಂಪೂರ್ಣ ಗಣಕೀಕೃತ! ಆದರೆ ಇಲ್ಲಿನ ಜೀವನ ಹಾಗಾಗಬಾರದು ಅಷ್ಟೇ! ಅಸಂಖ್ಯ ಹಳಿಗಳೇ ಧಮನಿಗಳಾಗಿ, ರೈಲು ನೆತ್ತರಾದಾಗ, ದೇಶ ನಿಜವಾಗಿಯೂ ಉಸಿರಾಡುತ್ತದೆ ಎಂದು ನನಗೆ ಈಗ ಚೆನ್ನಾಗಿ ಅರ್ಥವಾಯಿತು!

(ಮುಂದಿನಬಾರಿ: ೧೧. ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ)

Sunday, November 05, 2006

೯. 'ಕ್ಯೂಶೂ'ನಲ್ಲಿ ಕನ್ನಡ!

ನನ್ನ ಜಪಾನ್ ಪ್ರವಾಸ - ೯. 'ಕ್ಯೂಶೂ'ನಲ್ಲಿ ಕನ್ನಡ!
------------------------------------------

ಸರಿ, ಹೊಸ ಜಪಾನಿನ ಜೀವನ ಶೈಲಿ ನನಗರ್ಥವಾಯಿತು! ಜೊತೆಗೆ ಬಾಬಾ ಭಕ್ತ ಅಸಾಮಿಯೂ ಇದ್ದುದರಿಂದ ಹೇಗೋ ಕಾಲ ತಳ್ಳುತ್ತಿದ್ದೆ. ಆದರೂ ಒಂದು ತಿಂಗಳ ಕಾಲ ಕನ್ನಡ-ಇಂಗ್ಲಿಷ್-ಹಿಂದೀ ಗಳ ಸಹವಾಸವೇ ಇಲ್ಲದೆ ಜಪಾನೀ ಭಾಷೆಯಲ್ಲಿ ಮಾತ್ರ ಮಾತುಕತೆ ನಡೆಯಿತು. ಅಬ್ಬ! ಅಂತಹ ಕಷ್ಟ ಅನುಭವಿಸಿದವನಿಗೇ ಗೊತ್ತು! ಏಕೆಂದರೆ ಜಪಾನೀಭಾಷೆಯಲ್ಲಿ ನನಗೆ ತಿಳಿದದ್ದು ಅಲ್ಪ-ಸ್ವಲ್ಪ ಮಾತ್ರ; ಅದೂ ತೋಕಿಯೋದ 'ಶುದ್ಧ' ಭಾಷೆ. ಇಲ್ಲಿಯೋ, ಅಸಾಮಿಯ 'ಓಸಾಕಾಬೆನ್' ಹಾಗೂ ಇತರರ 'ಕ್ಯೂಶೂಬೆನ್' ನುಡಿಭೇದಗಳನ್ನೇ ಕೇಳಿ ಕೇಳಿ ನನಗೆ ಜಪಾನೀಭಾಷೆ ಬರುತ್ತದೆಯೇ ಎಂದೇ ಸಂದೇಹವಾಗುತ್ತಿತ್ತು! ಬಹುಶಃ ಬೆಂಗಳೂರಿನಲ್ಲಿ ಕನ್ನಡ ಕಲಿತ ವಿದೇಶೀಯನೊಬ್ಬ ಮಂಗಳೂರಿಗೆ ಹೋಗಿ ಹುಬ್ಬಳ್ಳಿಯ ಕನ್ನಡಿಗರೊಂದಿಗೆ ಮಾತನಾಡಿದಂತಾಗಿತ್ತು ನನ್ನ ಸ್ಥಿತಿ! ಮಂಗಳೂರು ಎಂದಾಗ ನೆನಪಿಗೆ ಬಂತು ನೋಡಿ; ಇಲ್ಲಿ ನಾನು ಪ್ರತಿದಿನ ಅನ್ನ ಕೊಳ್ಳುತ್ತಿದ್ದ 'ಕೊಂಬಿನಿ'ಯಲ್ಲೊಮ್ಮೆ ಎಂದಿನಂತೆ ಅನ್ನ, ಸಿಹಿಮೊಸರು ಕೊಂಡು ಅಸಾಮಿಯೊಡನೆ ಹೊರಬರಲು ತಿರುಗಿದಂತೆಯೇ, ಮೀಸೆ ಬಿಟ್ಟ ಕೆಂಗೂದಲ ಜಪಾನೀಯನೊಬ್ಬ ಕಣ್ಣಿಗೆ ಬಿದ್ದ. ನಮ್ಮಪ್ಪ ಹೇಳುತ್ತಿದ್ದ ರಾಗಿ ಮುದ್ದೆ ಬಗೆಗಿನ ನಾಣ್ಣುಡಿ ನೆನಪಾಗಿ ಅದು ಆಶು-ಅಣಕವಿತೆಯಾಗಿ ಆಗಲೇ ನನಗೆ ನಗೆಬುಗ್ಗೆಯುಕ್ಕಿಬಂತು!

ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ ! ಹಿಟ್ಟಂ ಬಿಟ್ಟಂ ಕೆಟ್ಟಂ! ಇದು ಹಳೇ ಮೈಸೂರಿನ ಬಾಯಿಪಾಠಂ!
ಆದರೆ ಜಪಾನಿನಲ್ಲಿ ಮೀಸೆ ಬಿಟ್ಟಂ, ಕೆಟ್ಟಂ! ಇದು ನನಗೆ ಜಪಾನೀ ಗುರುಗಳ ಪಾಠಂ!

ಮೀಸೆ ಬಿಟ್ಟವರೆಲ್ಲ ಕಳ್ಳಕಾಕರೆಂದುಕೊಳ್ಳುವ ಜಪಾನಿನಲ್ಲಿ ಇವನಾವನೋ ಮೀಸೆ ಬಿಟ್ಟಿದ್ದಾನಲ್ಲಪ್ಪ! ಎಂದು ಅಚ್ಚರಿಗೊಂಡು ಹಲಸಿಗೆ ಹಬ್ಬಿದ ಹುಲುಸಾದ ಕಸ್ಕ್ಯೂಟ ಕಳ್ಳಿ-ಬಳ್ಳಿಯಂತಿದ್ದ ಅವನ ಮೀಸೆಯನ್ನೇ ನೋಡುತ್ತಾ, ಬೋಳಿಸುವ ಮೊದಲು ಬೆಳೆದಿದ್ದ ನನ್ನ ಮೀಸೆಯ ನೆನಪಾಯಿತು. ಅವನನ್ನೇ ವಿಚಿತ್ರವಾಗಿ ನೋಡುತ್ತಾ ಮುನ್ನಡೆದಂತೆ, ಅವನ ಕೈಲಿದ್ದ ಒಂದಷ್ಟು ಕಾಗದಗಳತ್ತ ಕಣ್ಣು ಹರಿಯಿತು. ದಪ್ಪ ಅಕ್ಷರಗಳ ಕೈಬರಹದಲ್ಲಿ ಬರೆದಿದ್ದುದು ಕನ್ನಡ! ಪಂಪನ "ಆರಂಕುಶಮಿಟ್ಟೊಡಂ...", ನಾರಣಪ್ಪನ "ಜವನ ಮೀಸೆಯ ಮುರಿದನೋ..", ನೃಪತುಂಗನ "ಕಾವ್ಯಪ್ರಯೋಗಪರಿಣತಮತಿಗಳ್.." ಎಲ್ಲವೂ ಒಮ್ಮೆಲೇ ಕಿವಿಯಲ್ಲಿ ಮೊರೆದಂತೆ, ಕಣ್ಮುಂದೆ ಕನ್ನಡತಾಯಿ ಭುವನೇಶ್ವರಿಯೇ ಬಂದಂತಾಗಿ, ಕರ್ನಾಟಕ ಹೃದಯಶಿವನ ಮೂರ್ತಿ ಕನ್ನಡಡಿಂಡಿಮವನ್ನೇ ಬಾರಿಸುತ್ತಿರುವಂತೆ ಭಾಸವಾಗಿ ಅರೆಕ್ಷಣ, ಕಣ್ಕತ್ತಲಿಟ್ಟಿತು!


ನಾನೆಲ್ಲಿದ್ದೇನೆಂಬುದನ್ನೇ ಮರೆತುಹೋಗಿ, ಜೋರಾಗಿ "ಕನ್ನಡ! ಕನ್ನಡ! ಇದು ನನ್ನ ಭಾಷೆ ಕನ್ನಡ!" ಎಂದು ಕೂಗಿದೆ! ಮೀಸೆಯವನು ಬೆಚ್ಚಿ ತಿರುಗಿನೋಡಿದ; ಅಸಾಮಿ ಗಾಬರಿಯಿಂದ ಏನಾಯ್ತು ಎಂದ!

ನಾನು "ಅಸಾಮಿ ಸಾನ್! ಕೊರೆವ ವತಾಶಿನೊ ಬೊಕೊಕುಗೊನೊ ಕನ್ನದಗೊ ದೇಸುಯೋ!" [ಅಸಾಮಿಯವರೇ, ಇದು ನನ್ನ ತಾಯ್ನುಡಿ ಕನ್ನಡಭಾಷೆ ಕಣ್ರೀ!] ಎಂದೆ!

ಅಲ್ಲಿದ್ದವರೆಲ್ಲ ನನ್ನ ಮಾತಿಗೆ ಅಚ್ಚರಿಗೊಂಡು ಅವನ ಕೈಲಿದ್ದ ಕಾಗದವನ್ನು ಬಗ್ಗಿ ಬಗ್ಗಿ ನೋಡಲಾರಂಭಿಸಿದರು! ಆ ಮೀಸೆಯವನು ಆ ಕಾಗದದ ಪ್ರತಿಯೊಂದನ್ನು ನನ್ನ ಕೈಲಿಟ್ಟು ಓದಿ ನೋಡಿ ಎಂದ. ಶುದ್ಧ ಕನ್ನಡದಲ್ಲಿ ಕೈಬರಹದಲ್ಲಿ ಬರೆದಿದ್ದುದು ಇಷ್ಟೇ : 'ರುಚಿಯಾದ ಆಹಾರ'! ಮಿಕ್ಕೆಲ್ಲವೂ ಜಪಾನೀ ಭಾಷೆಯಲ್ಲಿತ್ತು! ಅದು 'ಗಣೇಶ' ಎಂಬ ಉಪಾಹಾರಮಂದಿರದ ಮೆನು ಅಥವಾ ತಿಂಡಿಪಟ್ಟಿ! ಇದು ನಿಮಗೆಲ್ಲಿ ಸಿಕ್ಕಿತೆಂದು ಕೇಳಿದೆ; ಅವನು ಆ 'ಗಣೇಶಭವನ'ದಲ್ಲಿ ಕೆಲಸ ಮಾಡುವವನಂತೆ! ತಿಂಡಿಪಟ್ಟಿಯ ನೆರಳಚ್ಚು ತೆಗೆಸಲು ಕೊಂಬಿನಿಗೆ ಬಂದವನಂತೆ. ಅದರ ಯಜಮಾನ ಮಂಗಳೂರಿನವನಂತೆ! ನಾನು ಕನ್ನಡಿಗನೆಂದ ಮೇಲೆ ಕಾಗುಣಿತ ಸರಿಯಿದೆಯೇ ನೋಡಿ ಎಂದ! ಕನ್ನಡ ಕಂಡ ಆನಂದದಲ್ಲಿ ಸರಿಯೆಂದುಬಿಟ್ಟೆ! ನಿಜವಾಗಿ 'ಯ'ಕಾರದ ಇಳಿ ಇರಬೇಕಿತ್ತು; ಇದ್ದದ್ದು 'ರುಚಿಯದ ಆಹಾರ' ಎಂದು! ಆ ಗಣೇಶಮಂದಿರದ ವಿಳಾಸ ಅದರಲ್ಲೇ ಇದ್ದುದರಿಂದ ಸಮಯವಾದರೆ ಬನ್ನಿ ಎಂದು ಹೊರಟ! ಕನ್ನಡದ ಕಂಪು ಜಪಾನಿನಲ್ಲಿಯೂ ಪಸರಿಸಿದೆಯೆಂದು ತಿಳಿದು ನನಗೆ ಕಣ್ಣು ತುಂಬಿ ಬಂತು!

"ಶಾರದೆ! ನಾನು ನಿನ್ನ ನಾಡನ್ನು ಬಿಟ್ಟೆ; ನೀನು ನನ್ನನ್ನು ಬಿಡಲಾರದೆ ಹುಡುಕಿಕೊಂಡು ಬಂದೆಯೇನು?! ಧನ್ಯನಾದೆ!" ಎಂದುಕೊಂಡೆ.

ಕ್ಯೂಶೂದ್ವೀಪದ ಕೊಕುರಾದಲ್ಲಿನ ಆ 'ಗಣೇಶಭವನ'ಕ್ಕೆ ನಾನು ಹೋಗಲಾಗಲಿಲ್ಲ. ಅದು ಮಾಂಸಾಹಾರಿ ಉಪಾಹಾರಗೃಹವೆಂಬುದು ಒಂದು ಕಾರಣ; ಜೊತೆಗೆ ಸಮಯವೂ ಇರಲಿಲ್ಲ; ಅಸಾಮಿಗೆ ಬೇಕಿರಲಿಲ್ಲ -

"ನೀನು ತಿನ್ನುವುದು ಅಲ್ಲೇನೂ ಇಲ್ಲವೆನಿಸುತ್ತದೆ - ಸಮೋಸ ಒಂದು ಬಿಟ್ಟು" ಎಂದ.

ನಾನು ತಿಂಡಿಪಟ್ಟಿಯನ್ನೋದಿದೆ; ಹೌದೆನಿಸಿತು. ಸಮೋಸ ಒಂದಕ್ಕೆ ೬೦೦ ಯೆನ್ ಎಂದು ಓದುತ್ತಲೇ, ನಿಡುಸುಯ್ದು, ಜೋಪಾನವಾಗಿ ತಿಂಡಿಪಟ್ಟಿಯನ್ನು ಮಡಚಿ ಒಳಗಿಟ್ಟುಕೊಂಡು, ಕೋಣೆಗೆ ಹೆಜ್ಜೆ ಹಾಕಿದೆ. ಮರುದಿನವೇ ಕ್ಯೂಶೂನಲ್ಲಿನ ಕೆಲಸ ಮುಗಿಸಿ ಓಸಾಕಾಗೆ ಮರಳಬೇಕಿತ್ತು - ನನ್ನ ಕೋಣೆಗೆ! ಸಂತಸಗೊಂಡೆ! ರಾತ್ರಿಯೆಲ್ಲ ಕನ್ನಡದ ಕನಸು! ಮುದ್ದಾದ ಸಿರಿಗನ್ನಡದ ಅಕ್ಷರಗಳನ್ನು ನೋಡಿಯೇ ಇಷ್ಟು ಆನಂದವಾಗಬೇಕಾದರೆ, ಎಂಥ ಶಕ್ತಿಯಿರಬೇಕು ಈ ಭಾಷೆಗೆ! ಮಂಪರಿನಲ್ಲೂ ಕನ್ನಡದ ಗುನುಗು! ಮುದ್ದಣ ಮನೋರಮೆಯರ ರಸಮಯ ಸಂಭಾಷಣೆಯಿಂದ ಹಿಡಿದು ಕೈಲಾಸಂ ಕಂಗ್ಲಿಷ್ ನಾಟಕಗಳವರೆಗೆ ಏನೇನೋ ನೆನಪಾಯಿತು! ಹಿಂದಿನವರ ಸಂತಸಮಯ ಬದುಕೂ ನಮ್ಮ ಈಗಿನ ಯಾಂತ್ರಿಕ ಬದುಕೂ ಎಷ್ಟು ವ್ಯತ್ಯಸ್ತವೆನಿಸಿತು.
ಅದಕ್ಕಲ್ಲವೇ ಗುಂಡಪ್ಪನವರು ಹೇಳಿದ್ದು ...ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳೈಸೆ ಸೊಗಸು ಜೀವನವು ಮಂಕುತಿಮ್ಮ....! ಹೌದು; ಆದರೆ ಈಗ ಇಲ್ಲಿ ಅದು ನಡೆಯದೋ ತಮ್ಮ! ಮುಸುಕೆಳೆದು ಮಲಗಿದೆ; ಕನಸಲಿ ಬಂದುದು ಅಮ್ಮ!
* * *
(ಮುಂದಿನ ಬಾರಿ: ರೈಲಿನ ರಾಜ್ಯ!)

Tuesday, October 17, 2006

ನೋವಿನ ಹಾಡು!

ನೋವಿನ ಹಾಡು!
--------------


ಧರಣಿಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟದೇಶದೊ
ಳಿರುವ ಬಣ್ಣದ ಬೆಂಗಳೂರಿನ ಕತೆಯ ನಾನಿಂದು ಪೇಳ್ವೆನು!

ಕಾಲುಚೆಂಡನು ಆಡಲೋಸುಗ
ಕಾಲು ಹಿಡಿದು ಬೇಡಿ ಕಾಡಿ
ಸೋಲುಬುರುಕರ ತಂಡಕಟ್ಟುವ ಮಂದಿಯಿರುವುದು ಇಲ್ಲಿಯೇ!

ಹಿಂದೆ ಬಂದರೆ ತಡೆಯಲಾರರು
ಮುಂದೆ ಬಂದರೆ ಒದೆಯಲಾರರು
ಕೊಂದರೂ ಒಂದು ಗೋಲು ಹೊಡೆಯರು ಚೆಂಡು ಇವರಿಗೆ ಏತಕೆ?

ಇಂತಿರುಪ ಕುಂತಲದ ಸುತರು
ಕುಂತಿರಲು ಆಕಳಿಸಿ ಸುಮ್ಮನೆ
ಬಂತಿದೋ ಆಹ್ವಾನ ನೋಡೈ ಜಪಾನಿನೊಡನೆ ಆಟಕೆ!

ತಟ್ಟಿದರು ತೊಡೆ ರಟ್ಟೆಗಳನು
ಕಟ್ಟಿದರು ತಮ್ಮ ಟೊಂಕಕರಿವೆಯ
ಜಟ್ಟಿಗಳು ನಾವೆನುತ ಬಾಯಲಿ ಬಿಟ್ಟ ಜುಟ್ಟನು ಕಟ್ಟುತಾ!

ಕಿರಿಯ ಕಣ್ಣಿನ ಹಿರಿಯ ಪಟುಗಳು
ಬರಿಯದೇತಕೆ ಮಾತು ಎನ್ನುತ
ಭಾರತದ ಈ ಪೆರ್ಮೆ ನೆಲಕೆ ತಮ್ಮ ಪಾದವನಿಟ್ಟರು!

ಬೆಂಗಳೂರಿನ ಗೊಡವೆ ತಿಳಿಯದೆ
ಅಂಗಳದಿ ಬಂದಿಳಿದು ನೋಡೆ
ಕಂಗಳನೆ ತಾವ್ ನಂಬದಾದರು ಶಿಥಿಲ ಕ್ರೀಡಾಂಗಣದಲಿ!

ಹುಲ್ಲ ಕಾಣದ ಧೂಳು ನೆಲದಲಿ
ಎಲ್ಲ ಪಟುಗಳು ಬಂದು ನಿಂತು
ಮೆಲ್ಲ ಮೆಲ್ಲನೆ ನಿಜವನರಿಯಲು ಅಲ್ಲಿ ಮೊಳಗಿತು ಗೀತೆಯು!

ಕಣ್ಣ ಹರಿಸಲು ಬರಿಯ ಅಂಗಳ
ಬಣ್ಣವರಿಯದ ಬಿರುಕು ತಂಗಳ
ಮಣ್ಣ ಹೊದ್ದ ಗೋಡೆ ಮೆಟ್ಟಲ ಮೇಲೆ ಕಾಣ ನರಪಿಳ್ಳೆಯೂ!

ಲೆಕ್ಕಿಸದೆ ಚೆಂಡಾಟಕಿಳಿದು
ಮುಕ್ಕಿಸುತ ಭಾರತಕೆ ಚಳ್ಳೆಯ
ಮಕ್ಕಳಾಟವ ಹೋಲುವಂದದಿ ನುಗ್ಗಿ ಹೊಡೆದರು ಗೋಲ್ಗಳ!

ಕನಲಿ ಸಂಜೆ ಮಬ್ಬಡರಿ ಪೋಗಿ
ಹೊನಲ ಬೆಳಕಿನ ಪಂಜು ಬೆಳಗಲು
ಜನಗಳೋ ಒಬ್ಬೊಬ್ಬರಾಗಿ ಬಂದು ಸೇರಿದರಲ್ಲಿಯೇ!

ಮೇಲೆ ಎರಗುವ ದಾಳಿಕೋರರ
ಕಾಲ ಒದೆತಕೆ ಬೆಬ್ಬಳಿಸುತಲಿ
ಗೋಲ ರಕ್ಷಕ ನಂದಿಕೇಶ್ವರ ಕುಸಿದು ಬಿದ್ದನು ಅಲ್ಲಿಯೇ!

ಎಲ್ಲ ಚೆನ್ನಿರೆ ಎಲ್ಲ ಕಾದಿರೆ
ಎಲ್ಲ ನೋಡಲು ತವಕದಿಂದಿರೆ
ಅಲ್ಲಿ ಆರಿತು ಹೊನಲ ಬೆಳಕು ಬೆಂಗಳೂರಿನ ಮಹಿಮೆಗೆ!

ಒಂಟಿ ಪಂಜಲಿ ಮಬ್ಬು ಬೆಳಕಲಿ
ಸೊಂಟ ಕಾಲನು ಒತ್ತಿ ಹಿಡಿಯುತ
ಭಂಟರೆಲ್ಲರು ಮುಂದುವರಿಯಲು ಝಗ್ಗನೆ ಬೆಳಕಾಯಿತು!

ಸುಯ್ದರೋ ನಿಡಿದಾಗಿ ಜನರು
ಕಾಯ್ದರವರಾರಕ್ಷ ಭಟರು
ಬಯ್ದರೋ ಹೊರನಾಡ ಜನರು, ನಕ್ಕರೋ ಆತಿಥೇಯರು!

ಮೂರು ಗೋಲ್ಗಳ ಹೊಡೆಸಿಕೊಂಡು
ಮಾರು ದೂರಕೆ ಚೆಂಡನೊದೆಯುವ
ಹಾರಿ ತಡೆಯದೆ ಸೋತ ಭಾರತ ಜೋಲುಮೋರೆಯ ಹಾಕಿತು!

ಆಡಿ ಮುಗಿಸಲು ಚಣಗಳಿರಲು
ನಾಡ ಭಕುತ ಬೀದಿ ನಾಯಿ
ಓಡುತಾ ತಾನಾಡಲೆಂದು ಹಾರಿತು ಮೈದಾನಕೆ!

ಅಮ್ಮಗಳಿರಾ! ಅಪ್ಪಗಳಿರಾ!
ಎಮ್ಮ ಅನ್ನದಾತಗಳಿರಾ!
ಸುಮ್ಮನೆ ಸೋಲುವಿರಿ ಏಕೆ? ನಾನು ಆಡುವೆ ಎಂದಿತು!

ಆರ ಚೆಂಡನು ಒದೆಯಲಮ್ಮಾ!
ಆರ ಕಾಲನು ಕಚ್ಚಲಮ್ಮಾ!
ಆರ ಮೇಲೆ ಎರಗಲಮ್ಮಾ! ಆರು ನಮ್ಮನು ಗೆಲುವರು?

ಕಟ್ಟೆಯೊಡೆಯಿತು ನಗೆಯ ಹೊನಲು!
ಚಟ್ಟವೇರಿತು ನಗರ ಕೀರುತಿ!
ನಟ್ಟ ನಡುವಲಿ ಆಟ ನಿಲ್ಲಲು ತಲೆಯ ಬಾಗಿದರೆಲ್ಲರೂ!

ಸಾಲದೆನ್ನಲು ಮತ್ತೆ ಆರಿತು
ಕಾಲಕಾಲಕೆ ಹೊನಲ ಬೆಳಕು
ಕಾಲವಾಯಿತು ಬೆಂಗಳೂರಿನ ಸಾಲಮಾಡಿದ ಪೆರ್ಮೆಯು!

ಪಕ್ಕೆಹಿಡಿದು ನಗುತ ಹೊರಳುವ
ಪಕ್ಕದಲಿಹ ಜಪಾನಿ ಜನರ
ಮಿಕ್ಕ ಮಾತಿಗೆ ಸಿಲುಕದೆಯೆ ನಾ ಮೂಕನಾದೆನು ಇಲ್ಲಿಯೇ!

ನಿತ್ಯವೂ ಅಪಮಾನಗೊಳುವ ಭಾರತೀಯನ ಕಥೆಯಿದು!



- ಬೆನಕ


(೨೦೦೬.೧೦.೧೧ ರಂದು ಬೆಂಗಳೂರಿನಲ್ಲಿ ನಡೆದ ಭಾರತ-ಜಪಾನ್ ಹೊನಲು ಬೆಳಕಾರಿದ ಪಂದ್ಯವನ್ನೂ, ಮೈದಾನಕ್ಕೆ ನುಗ್ಗಿದ ಬೀದಿನಾಯಿಯನ್ನೂ ಜಗಜ್ಜಾಹೀರು ಮಾಡಿ ಬೆಂಗಳೂರಿನ ನೈಜತೆಯನ್ನು ತೋರಿಸಿದ ಜಪಾನ್ ದೂ.ದ ನೇರಪ್ರಸಾರದಿಂದ ನೊಂದ ಬಳಿಕ ಬರೆದದ್ದು)

Tuesday, October 10, 2006

೮. ಹಳೆಯ ರಾಜ್ಯ ಇನ್ನಿಲ್ಲ!

ನನ್ನ ಜಪಾನ್ ಪ್ರವಾಸ: ೮. ಹಳೆಯ ರಾಜ್ಯ ಇನ್ನಿಲ್ಲ!


ಸರಿ, ಯಥಾಪ್ರಕಾರ ಕ್ಯೂಶೂದ್ವೀಪದ ಕೆಲಸ ಮುಂದುವರೆಯಿತು. ಕೆಲಸಕ್ಕೆ ಸ್ವಲ್ಪ ಹೊಂದಿಕೊಂಡದ್ದರಿಂದ ಈಗ ಕೆಲಸದ ಜೊತೆಗೆ ಜಪಾನಿನ ಸಮಾಜ - ಜೀವನವನ್ನು ನೋಡಲು ಶುರುಮಾಡಿದೆ. "....ಜಪಾನ್ ದೇಶ ಕಷ್ಟಜೀವಿಗಳ ಶ್ರಮಜೀವಿಗಳ ತಾಣ; ಆದ್ದರಿಂದಲೇ ಅದು ಇಂದು ಮುಂದುವರೆದ ದೇಶವಾಗಿದೆ...." ಐದನೇ ತರಗತಿಯ ಸಮಾಜಪರಿಚಯದ ಭೂಗೋಳದ ಪಾಠದ ವಾಕ್ಯ ನೆನಪಾಯಿತು. ನೂರಕ್ಕೆ ನೂರು ಸತ್ಯ; ಆದರೆ ಈಗಲ್ಲ! ಮೂವತ್ತು ನಲವತ್ತು ವರ್ಷಗಳ ಹಿಂದೆ ನಿಜವಾಗಿದ್ದ ಸಂಗತಿಯಿದು! ಈಗ ಆ ವಾಕ್ಯವನ್ನು "ಜಪಾನ್ ದೇಶ, ಸೋಮಾರಿ ಯುವಜನರ ತಂಗುದಾಣ" ಎಂದು ಬದಲಿಸುತ್ತಿದ್ದೆ. ಈಗ ಬೆಳಿಗ್ಗೆ ಎಬ್ಬಿಸುವುದರಿಂದ ಹಿಡಿದು, ಮಲಗಿಸುವವರೆಗೆ ಎಲ್ಲಾ ಕೆಲಸ ಮಾಡಲು ಯಂತ್ರಗಳೇ ಬಂದಿವೆಯಾದ್ದರಿಂದ ಮನುಷ್ಯನಿಗೆ ಕೇವಲ ಉಸಿರಾಡುವುದಷ್ಟೇ ಕೆಲಸ. ದೇವರಾಣೆ ಸತ್ಯ ಸ್ವಾಮೀ; ಇವರಷ್ಟು ಸುಖದಿಂದ ಬೆಳೆದಿರುವ ಇಂದಿನ ಯುವಕರನ್ನು ನಾ ಕಾಣೆ! ಶ್ರಮಜೀವಿಗಳಾಗಿದ್ದವರು ಈಗ ವಯಸ್ಸಾಗಿ ನಿವೃತ್ತಿಯ ಅಕ್ಕ-ಪಕ್ಕದಲ್ಲಿರುವವರು; ಸುಖಾರ್ಥಿ ಧೋರಣೆಯ ಈಗಿನ ಯುವಜನರಲ್ಲ. ಈಗಿನ ಶ್ರಮ(?)ಜೀವಿಗಳು ಕೆಲಸವನ್ನು ಹಿಂದಿನವರಂತೆ ದೇಶಕ್ಕಾಗಿ, ಅಭಿವೃದ್ಧಿಗಾಗಿ ಮಾಡುವವರಲ್ಲ; ಕೇವಲ ದುಡ್ಡಿಗಾಗಿ ಮಾಡುವವರು. ಇಲ್ಲಿನ ಸರರೀಮನ್[=ಸ್ಯಾಲರೀಮನ್ ಅಂದರೆ ಸಂಬಳದ ಶ್ರೀಸಾಮಾನ್ಯ] ಪ್ರತಿದಿನ ಮನೆಗೆ ಮರಳುವುದು ಕೆಲಸದ ವೇಳೆ ಮುಗಿದು ಮೂರುಗಂಟೆಗಳಾದಮೇಲೆಯೇ. ಈ ಝಾಂಗ್ಯೋ[=ಅಧಿಕಾವಧಿ ಕಾರ್ಯ = ಓವರ್‌ಟೈಮ್] ಕೆಲವರಿಗೆ ಅನಿವಾರ್ಯ ಹಾಗೂ ಅವಿಭಾಜ್ಯ ಅಂಗ! ನಿಜವಾಗಿಯೂ ಅಷ್ಟು ಕೆಲಸವಿರುವವರು ಕಡಿಮೆಯೇ ಆದರೂ, ಮೇಲಧಿಕಾರಿಯನ್ನು ಮೆಚ್ಚಿಸಲು, ಕೆಲಸ ಅಂಥದ್ದೇನೂ ಇಲ್ಲದಿದ್ದರೂ ತಾವೂ ಸುಮ್ಮನೆ ಕುಳಿತಿರುವವರೇ ಹೆಚ್ಚು! ಇನ್ನು ಕೆಲವರಿಗೆ ಕೆಲಸ ಶುರುವಾಗುವುದೇ ಕಛೇರಿಯ ನಿತ್ಯಾವಧಿ ಮುಗಿದ ಬಳಿಕ; ಝಾಂಗ್ಯೋ ದುಡ್ಡು ಬಂದರೆ ಬಿಡುವ ಮೂರ್ಖರುಂಟೇ? ಅಂಥದ್ದೇನೂ ಗಿಟ್ಟದೆಂದು ತಿಳಿದರೆ, ಅಥವಾ ಕೆಲಸದಲ್ಲಿ ಅಷ್ಟೇನೂ ಮನಸ್ಸಿಲ್ಲದವರಾದರೆ, ಸಂಜೆ ೫ : ೪೫ ಕ್ಕೆ ಗಂಟೆ ಢಣ್ಣೆನ್ನುತ್ತಿದ್ದಂತೆ ಎದ್ದೆನೋ ಬಿದ್ದೆನೋ ಎಂದು ಎಲ್ಲಾ ಪರಾರಿ! ಅವರ ಗಣಕ ಕೆಲವೊಮ್ಮೆ ಆರುವುದು ಎರಡು ನಿಮಿಷ ತಡವಾದರೆ ಅವರು ಪಡುವ ಸಂಕಟ ನೋಡಬೇಕು ನೀವು!

ಇಂಥವರ ಕೈಲಿ ಹೇಗಾದರೂ ಕೆಲಸ ಮಾಡಿಸಲೇಬೇಕೆಂದು ಹಠಹಿಡಿದು ತಲೆಯಲ್ಲಿನ ಕೂದಲುಗಳನ್ನೆಲ್ಲಾ ಕಳೆದುಕೊಳ್ಳುತ್ತಿರುವ ಹಿರಿಯ ಅಧಿಕಾರಿಗಳು, ಬೇಕೆಂದೇ ಸಂಜೆ ೫: ೪೦ ಕ್ಕೆ ಅವರಿಗೆ ಹೊಸಕೆಲಸ ವಹಿಸಿ ಬೆಳಿಗ್ಗೆಯೊಳಗೆ ಮುಗಿಸೆನ್ನುವುದೂ ಇದೆ! ಇಂಥ ಸಂದಿಗ್ಧಗಳಲ್ಲೇ ಸಿಲುಕಿ ಜೀವನವನ್ನೆಲ್ಲಾ ಅವರು ಕಳೆದಿದ್ದಾರೆ; ಆದರೆ ಯುವಜನ ಅದಕ್ಕೆಲ್ಲ ಸೊಪ್ಪುಹಾಕುವ ಮಂದಿಯಲ್ಲ; "ನನ್ನಿಂದಾಗದು!" ಎಂದು ಸೀದಾ ಕಳಚಿಕೊಂಡವರೂ ಇದ್ದಾರೆ! ಆಜೀವ ಉದ್ಯೋಗ ವ್ಯವಸ್ಥೆಯೇ ಹೆಚ್ಚಿರುವ ಜಪಾನಿನಲ್ಲಿ ಕೆಲಸ ಕಳೆದುಕೊಳ್ಳುವ ಭಯ ಅವರಿಗೂ ಇಲ್ಲ; ತೆಗೆಯುವ ದುಸ್ಸಾಹಸದ ಧೈರ್ಯ ಅಧಿಕಾರಿಗಳಿಗೂ ಇಲ್ಲ. ಅಪ್ಪಿ ತಪ್ಪಿ ಹೊರಬಿದ್ದರೆ, ಇದ್ದೇ ಇದೆ ಎಂಥದೋ ಒಂದು ಅಲ್ಪಕಾಲದ ಕೆಲಸ; ದುಡ್ಡಿಗಂತೂ ಯಾವ ತೊಂದರೆಯೂ ಇಲ್ಲ! ನಷ್ಟ ಯುವಜನರನ್ನು ಕಳೆದುಕೊಳ್ಳುವ ಕಛೇರಿಯದೇ! ಯುವಕರಿಗಲ್ಲ! ಝಾಂಗ್ಯೋ ಮಾಡುವ ಸರರೀಮನ್ ಗಳು ರಾತ್ರಿ ಮನೆಗೆ ಹೋಗುವಷ್ಟರಲ್ಲಿ ೧೨ ಆಗಿರುವುದೂ ಉಂಟು. ಮಾರ್ಗಮಧ್ಯೇ, ದಿನದ ಎಲ್ಲ ಒತ್ತಡಗಳನ್ನು ಕಳೆದುಕೊಳ್ಳಲು ಜೂಜಿಗೋ, ಪಾನೀಯಕ್ಕೋ, ಅಂಗಮರ್ದನಕ್ಕೋ ಮುಗಿಬಿದ್ದು ತೂರಾಡುತ್ತಾ ಮನೆ ಸೇರಿದಾಗ ಮಕ್ಕಳೆಲ್ಲ ಮಲಗಿರುವುದೂ ಉಂಟು! ಬೆಳಿಗ್ಗೆ ಅವು ಏಳುವ ಮೊದಲೇ ಮನೆ ಬಿಡುವ ಅಪ್ಪನ ಮುಖ ಕಾಣುವುದು ವಾರಕ್ಕೊಮ್ಮೆಯೇನೋ! ಅಂಥವರನ್ನು "ಅಪ್ಪನ ಬೆನ್ನು ನೋಡಿ ಬೆಳೆದವರು" ಎನ್ನುವ ಜಪಾನೀ ನಾಣ್ಣುಡಿಯಿಂದ ಗುರುತಿಸುವುದು ಇಲ್ಲಿ ಜನಜನಿತ!

ಎಲ್ಲರೂ ಮಾಡುವುದು ಓ. ಟಿ. ಗಾಗಿ; ನೋಟಿಗಾಗಿ! ಖಂಡಿತ ಹೊಟ್ಟೆ-ಬಟ್ಟೆಗಾಗಿ ಅಲ್ಲ! ಏಕೆಂದರೆ ಇವರು ಹೆಚ್ಚಿಗೆ ಇವೆರಡಕ್ಕೂ ವೆಚ್ಚಮಾಡುವುದೇ ಇಲ್ಲ! ಮಧ್ಯಾಹ್ನದ ಊಟಕ್ಕಾಗಿ ಕಡಿಮೆಬೆಲೆಯ ಅಂಗಡಿಯ ಮುಂದೆ ಸಾಲುಗಟ್ಟಿ ನಿಲ್ಲುವವರನ್ನೋ, ಅಥವಾ ಒಬೆಂತೋ[ಬುತ್ತಿ]ಯನ್ನು ಮಾರುವವನ ಕಡೆಗೆ ನುಗ್ಗಿ ಹೋಗುವವರನ್ನೋ ನೋಡುವುದು ಇಲ್ಲಿ ಸಾಮಾನ್ಯ ದೃಶ್ಯ. ಬಟ್ಟೆಯ ಬಗ್ಗೆ ನೀವು ಕೇಳದಿರುವುದೇ ಕ್ಷೇಮ! ಪ್ರತಿದಿನ ಅದೇ ಅಂಗಿ; ಅದೇ ಷರಾಯಿ! ಬದಲಿಸಿದರೆ ನೆಕುತೈ[ನೆಕ್ ಟೈ] ಮಾತ್ರ! ಎಂಥ ದೊಡ್ಡ ಕಛೇರಿಯಲ್ಲಿದ್ದರೂ 'ಈ ಬುದ್ಧಿ'ಯನ್ನು ಬಹಳಷ್ಟು ಜನ ಬಿಡುವುದೇ ಇಲ್ಲ! ಒಂದೇ ಅಂಗಿ - ಅದೂ ವರ್ಷಗಟ್ಟಲೆ?! ಒಗೆಯುತ್ತಾರೆಂದುಕೊಂಡಿದ್ದೇನೆ; ಯಾವಾಗ ಎಂದು ಕೇಳಬೇಡಿ! ಒಂದೇ ಅಂಗಿಯೇ? ಇರಲಾರದು ಎಂದು ನಾನೂ ನಿಮ್ಮಂತೆ ಅನುಮಾನಪಟ್ಟಿದ್ದಿದೆ. ಅಬ್ಬಬ್ಬ ಎಂದರೆ ೨-೩ ಅಂಗಿ... ಮುಗಿಯಿತು ಅಷ್ಟೇ! ಒಂದೇ ಬಣ್ಣದ ಬಟ್ಟೆಯಾದರೆ, ನನಗೇನು ಎಲ್ಲರಿಗೂ ತಿಳಿಯುತ್ತದೆ ಬಿಡಿ! ಅದಕ್ಕೆ ಇವರೊಂದು ಉಪಾಯ ಕಂಡುಹಿಡಿದುಕೊಂಡಿದ್ದಾರೆ - ಎಲ್ಲರೂ ಬಿಳಿಯ ಅಂಗಿಯನ್ನೇ ಧರಿಸಿಬಿಡುವುದು! ಪ್ರತಿದಿನ! ವರ್ಷದ ಪ್ರತಿದಿನವೂ! ಹೇಗಿದೆ ತಂತ್ರ? ಬೇರೆಯವರಿಗೆ ಕಣ್ಣು ಕೈಕೊಡಬಹುದು; ನಾನು ಇವರ ಪಕ್ಕದಲ್ಲೇ ಪ್ರತಿದಿನ ಕೂಡುವವನು ಸ್ವಾಮೀ!

ಇವನಿಗೇನು ತಲೆಕೆಟ್ಟಿದೆಯೇ ಎಂದುಕೊಳ್ಳಬೇಡಿ! ನಾನು ಹೇಳುತ್ತಿರುವುದೆಲ್ಲ ಸತ್ಯ! ಆದರೆ ಕಾರಣವಿದೆ; ಜಪಾನೀ ಶ್ರೀಸಾಮಾನ್ಯ ಸರರೀಮನ್ ಹೀಗೆ ಮಾಡಲು ಕಾರಣವಿದೆ! ಜಪಾನಿನಲ್ಲಿ ಆಹಾರ-ಬಟ್ಟೆ-ವಸತಿ ಸಿಕ್ಕಾಪಟ್ಟೆ ದುಬಾರಿ - ಇಲ್ಲಿದ್ದು ನೋಡದವರ ಊಹೆಗೂ ನಿಲುಕದಷ್ಟು! ಹೀಗಿರುವಾಗ ಕಡಿಮೆ ಬೆಲೆಯ ಊಟ-ಬಟ್ಟೆ ಕೊಂಡರೆ ತಪ್ಪೇನು? ಆದರೆ, 'ಉಳ್ಳವರೂ' ಇದೇ ಬುದ್ಧಿ ತೋರುವುದು ಸ್ವಲ್ಪ ಅರ್ಥವಾಗದು; ಅರ್ಥವಾಗದ್ದೇನಲ್ಲ - ಹೀಗೆ ಉಳಿಸಿದ ಹಣವನ್ನು ಜೂಜು - ಮೋಜು - ವಿನೋದ - ಮೇಜುವಾನಿಗಳಿಗೆ ಸುರಿಯುತ್ತಾರೆ! ಏನೇ ಹೇಳಿ, ಎರಡು ಅಂಗಿ ಕೊಳ್ಳಬಹುದು; ಅದರಲ್ಲಿ ಜುಗ್ಗತನ ನೋಡಿದ್ದು ಇದೇ ಮೊದಲು. ಬಿಳಿಯ ಬಟ್ಟೆಯಾದರೆ ಎರಡೋ ಮೂರೋ ಇರಬಹುದು ಎಂದುಕೊಂಡೀರಿ; ಪ್ರತಿದಿನ ಹಳದಿಯೋ ನೀಲಿಯೋ ಆದಲ್ಲಿ ಅಂಗಿ ಒಂದೇ ಎಂದು ಅಲ್ಲಿ ಕುಳಿತಿರುವ ನಿಮಗೂ ತಿಳಿಯುತ್ತದೆ. ಆದರೆ ಎಲ್ಲರೂ ಹಾಗೇ ಏನಲ್ಲ; ಎಲ್ಲ ನಿಯಮಕ್ಕೂ ಅಪವಾದವಿದೆಯಲ್ಲವೇ! ೫-೬ ಅಂಗಿ, ಷರಾಯಿಯವರೂ, ಸಾಲ ಮಾಡಿ ಪ್ರತಿವಾರ ಹೊಸ ನೆಕುತೈ ಕೊಳ್ಳುವವರೂ ಇದ್ದಾರೆ. ಒಳ್ಳೆಯ ಅಂದರೆ ದುಬಾರಿ ಊಟ ಕೊಳ್ಳುವವರೂ ಇದ್ದಾರೆ; ತಾವು ಠೀವಿಯಿಂದ ನಡೆದಾಡಿ ಕಂಡವರೆಲ್ಲಾ ತಮ್ಮನ್ನು ನಖಶಿಖಾಂತ ನೋಡಿ ಬಾಯ್ಬಿಡಲೆಂದು ಬಯಸುವವರೂ ಇದ್ದಾರೆ; ಪ್ರತಿದಿನ ಹೊಸ ಅಥವಾ ಬೇರೆ ಬಟ್ಟೆ ಹಾಕಿಕೊಂಡು ಮೇಲೆ ಸೂಟು ಎಂಬ ಸರರೀಮನ್ನರ ಪತಾಕೆಯನ್ನು ಹೊದ್ದು ಪ್ರತಿನಿತ್ಯದ ರೈಲಿನಲ್ಲಿ ಉಜ್ಜಾಡಿಕೊಂಡು ಕಛೇರಿಗೆ ಬಂದವರೇ ಎಂದಿನಂತೆ 'ಸಮವಸ್ತ್ರ' - ಅದೇ ಹಳೆಯ ಅಂಗಿ-ಷರಾಯಿಗೆ ಬದಲಿಸಿಕೊಂಡು ಪ್ರತ್ಯಕ್ಷವಾಗುತ್ತಾರೆ! ಕಛೇರಿಯಲ್ಲಿ ಮನುಷ್ಯನ ಮುಖಕ್ಕಿಂತ, ಅವನ ಬಟ್ಟೆಯನ್ನು ನೋಡಿಯೇ ಹೇಳಬಹುದು ಅವನಾರೆಂದು! ಎಂದಿಗೂ ಈ ತರ್ಕ ತಪ್ಪದು!

ಇನ್ನು ಪಾದರಕ್ಷೆ! ಬೂಟು, ಷೂ ರೈಲಿನಲ್ಲಿ ಬರುವಾಗ ಮಾತ್ರ! ಕಛೇರಿಯೊಳಗೆ ನಡೆದಾಡಲು ಹವಾಯಿ ಚಪ್ಪಲಿಯಂಥಾ ಪಾದುಕೆ! ಆದ್ರೆ ಪ್ರತಿದಿನ ಕಾಲುಚೀಲ ಮಾತ್ರ ಬದಲಿಸುವ ಒಳ್ಳೆಯ ಬುದ್ಧಿ ಇಲ್ಲಿ ಎಲ್ಲರಿಗೂ ಇದೆ. ಕಛೇರಿಯಲ್ಲಿ ಈ ಎಲ್ಲ ಬಟ್ಟೆ-ಬರೆಗಳನ್ನಿಡಲು, ಸೂಟಿನ ಕೋಟು ನೇತುಹಾಕಲು ಒಂದು ರೊಕ್ಕಾ[=ಲಾಕರ್] ಇರುತ್ತದೆ. ಅದು ಇದ್ದುದಕ್ಕೆ ಬದುಕಿದೆವು; ಇಲ್ಲವಾದರೆ, ವರ್ಷಕ್ಕೊಮ್ಮೆ(?) ಅಗಸನ ಕೈಸೇರುವ ಸೂಟಿನ ಕೋಟಿನ ನಾತ ಕುಡಿಯುವುದು ನಮಗ್ಯಾವ ಕರ್ಮ! ತಮಾಷೆ ಸಾಕೆನ್ನುವಿರಾ? ನಿಜವಾದ ತಮಾಷೆ ಇನ್ನು ಮುಂದೆ! ಜಪಾನೀಯರಿಗೆ ಬೆಳಿಗ್ಗೆ ಹಲ್ಲುಜ್ಜುವ ಅಭ್ಯಾಸವಿಲ್ಲ; ಎದ್ದ ಮೇಲೆ ಸ್ನಾನ ಮಾಡುವುದಿಲ್ಲ! ಶೌಚದಲ್ಲಿ ತೊಳೆಯುವುದು ಇವರಿಗೆ ಗೊತ್ತಿಲ್ಲ; ಸದ್ಯ ಈ ಚಳಿಯಲ್ಲಿ ನೀರು ಸೋಕಿದರೆ ನಖಶಿಖಾಂತ ಸೆಟೆದುಕೊಳ್ಳುವ ಭಯಕ್ಕೇ ಅರ್ಧ ಮೈ ತಣ್ಣಗಾಗುತ್ತದೆ. ಈಗ ಹೇಳಿ ಸ್ವಾಮಿ ನಾತದ ವಿಚಾರ!






















ತಲೆಗೂದಲು ಬಾಚಲು ಗೊತ್ತಿರುವುದು ಐವತ್ತರ ಮೇಲಿನ 'ಯುವ'ಜನರಿಗೆ ಮಾತ್ರ; ಅರ್ಥಾತ್ ಎರಡನೇ ವಿಶ್ವಯುದ್ಧದ ಆಚೀಚಿನ ವರ್ಷಗಳಲ್ಲಿ ಹುಟ್ಟಿದವರಿಗೆ ಮಾತ್ರ. ಮಿಕ್ಕ 'ಕೇಶ'ವರಾಯರುಗಳನ್ನು ನೋಡಿ ಬೈ-ತಲೆಯಿರಲಿ ತಲೆಯೇ ಕೆಟ್ಟಿದೆ ಎಂದುಕೊಂಡದ್ದಿದೆ! ಹುಡುಗಿಯರಂತೂ, ನವಿಲನ್ನು ನೋಡಿ ಕೆಂಬೂತ ಪುಕ್ಕ ತೆರೆದುಕೊಂಡಂತೆ, ಸಿಕ್ಕಾಪಟ್ಟೆ ಬಣ್ಣ ಬಳಿದು ಕೆಂಪಾಗಿಸಿಕೊಂಡ ತಮ್ಮ ಕೂದಲಿನಿಂದ ತಾವೂ ಅಮೆರಿಕನ್ನರು ಎಂದು ಬೀಗುತ್ತಾರೆ! ತಮಾಷೆಯೆಂದರೆ ಸ್ವಲ್ಪ ದಿನಗಳ ನಂತರ ಕೂದಲಿನ ಬುಡದಿಂದ ಕಪ್ಪು ನೈಸರ್ಗಿಕ ಕೂದಲು ಬೆಳೆಯತೊಡಗಿ, ಮೊದಲು ಬಳಿದುಕೊಂಡ ಬಂಗಾರದ ಬಣ್ಣದೊಡನೆ ಸೇರಿ 'ಕಲರ್-ಕಲರ್' ಎಂದು ಎದ್ದು ಕುಣಿಯುತ್ತಿರುತ್ತವೆ! ಅಮೆರಿಕನ್ನರಾಗಲು ತಲೆಗೆ ಬಣ್ಣ ಬಳಿದುಕೊಂಡವರಲ್ಲಿ ಹುಡುಗರೇನೂ ಕಡಿಮೆಯಿಲ್ಲ; ಅವರೂ 'ಕಲರ್-ಕಲರ್' ಶೈಲಿಯ ಕೋಳಿಪುಕ್ಕದಂತೆ ಬಾಚಿ - ಅಲ್ಲಲ್ಲ - ಚಾಚಿಕೊಂಡ ಕೂದಲಿನವರೇ! ಇನ್ನೂ ಹೆಚ್ಚೆಂದರೆ, ಹುಂಜದ ಹುಟ್ಟಿನ ಜುಟ್ಟಿನವರೂ, ಘಮಲದೆಣ್ಣೆಯ ಸುರುವಿ ಚೂಪಾಗಿ ತಿರುವಿ ನಿಂತ ಮುಳ್ಹಂದಿ ತಲೆಯವರೂ, ಅಯ್ಯಯ್ಯಪ್ಪ.... ಊದಾ ಬಣ್ಣದ, ನೀಲಿ ಬಣ್ಣದ ಕೂದಲಿನ ಅಜ್ಜಿಗಳೂ, ಮುಖದ ತುಂಬಾ ಬರಿಯ ಹಲ್ಲೇ ಕಾಣುವಂತಿರುವ ಇಪ್ಪತ್ತು ಮಿಲಿಮೀಟರ್ ಮೀರಿದ ದಪ್ಪ ತುಟಿಬಣ್ಣದವರೂ ಇದ್ದಾರೆ! ನಗೆಯು ಬರುತಿದೆ ಎನಗೆ ನಗೆಯು ಬರುತಿದೆ! ಎಂಥ ಜನ! ಬರಿಯ ಅಮೆರಿಕದ ಮೂಢ ಹಿಂಬಾಲಕರು! ಕುವೆಂಪುರವರ ಕ್ಷಮೆ ಕೋರಿ ಹೀಗೆನ್ನಬೇಕೆನಿಸುತ್ತಿದೆ:




















ಅವ್ವಿಲಿ, ಅಪ್ಪಿಲಿ, ಅಣ್ಣಿಲಿ, ತಂಗಿಲಿ, ಮಾವಿಲಿ, ಬಾವಿಲಿ
ಹರುಕಲು ಬಟ್ಟೆಲಿ, ಕೆದರಿದ ಜುಟ್ಟಲಿ, ಎತ್ತರ ಮೆಟ್ಟಲಿ
ಬಣ್ಣದ ಪಟ್ಟೆಲಿ, ತೆರೆದಾ ಹೊಟ್ಟೆಲಿ - ಎಲ್ಲಾ ಬಂದವು ಓಡೋಡಿ!
'ಜೋಗಿಯು' ಬಾರಿಸೆ ಕಿಂದರಿಯ!

ರೋಗದ ತಂದೆಯ ಬಿಟ್ಟೋಡಿದವು! ಕೈಲಾಗದ ತಾಯಿಯ ಮರೆತೋಡಿದವು!
ವಿಗ್ರಹಬುದ್ಧನ ಒದ್ದೋಡಿದವು! ನಿಗ್ರಹವಿಲ್ಲದೆ ಕುಣಿದಾಡಿದವು!
ಹೆದರಿಕೆಯಿಲ್ಲದೆ ಬೆದರಿಕೆಯಿಲ್ಲದೆ ಕುಡಿದಾಡಿದವು! ಬಡಿದಾಡಿದವು!
ನುಗ್ಗುತ ಹಿಗ್ಗುತ ಕನಸಲಿ ಹಾರುತ ಎಲ್ಲಾ ಬಂದವು ಓಡೋಡಿ!
'ಜೋಗಿ'ಯು ಬಾರಿಸೆ ಕಿಂದರಿಯ!



ನಿಜ! ಪಾಶ್ಚಾತ್ಯ ಜೋಗಿಯ ಕಿಂದರಿಗೆ ಬಲಿಬಿದ್ದವರಿವರು! ಇಡೀ 'ಕಿಂದರಿಜೋಗಿ' ಪದ್ಯರೂಪಕವನ್ನೇ ಇಂದಿನ ಜಪಾನಿನ ಜನಜೀವನಕ್ಕೆ ಹೋಲಿಸಿದರೆ, ಭವಿಷ್ಯ ಇತ್ಯರ್ಥವಾದಂತೆಯೇ! ಅಬ್ಬಾ.. ಜೋಗೀ! ಎಂತಹ ಕಿಂದರಿ ನಿನ್ನದು! ಇಡೀ ಜಪಾನೀ ಸಮಾಜ ನಿನ್ನ ಕಿಂದರಿಗೆ ಕುಣಿಯುವುದೆಂದರೆ...! ನಾನು-ನೀವು ಕೇಳಿ ತಿಳಿದ ಹಳೆಯ ಜಪಾನ್ ಇನ್ನಿಲ್ಲ; ಇನ್ನಿಲ್ಲ! ಥೂ! ಬರಿಯ ನಿರಾಶಾವಾದ, ಪೆಸಿಮಿಸ್ಮ್ ಎನ್ನಬೇಡಿ; ಏಕೆಂದರೆ ಇದು ಕಹಿ ಸತ್ಯ! ಜಪಾನನ್ನು ನಾನು ಕಾಮಾಲೆ ಕಣ್ಣುಗಳಿಂದ ನೋಡುತ್ತಿಲ್ಲ; ಇಲ್ಲಿ ಯಾವ ಪೂರ್ವಾಗ್ರಹವೂ ಇಲ್ಲ. ಎಲ್ಲವನ್ನು ಕಣ್ಣಾರೆ ಕಂಡು, ವಿಚಾರಿಸಿ, ಕೆಲವನ್ನು ಅವರೇ 'ಹೌದು' ಎಂದ ಮೇಲೆ ಬರೆದ ಸತ್ಯ ವಾಕ್ಯ! ನಾನು ಮೊದಲೇ ಹೇಳಿದಂತೆ ಇವರ ಈ ಎಲ್ಲ 'ರೀತಿ-ನೀತಿ'ಗಳಿಗೂ ಕಾರಣವಿದೆ - ಎರಡನೇ ವಿಶ್ವಯುದ್ಧದ ಹೀನಾಯ ಸೋಲು! ಎರಡೇ ಅಣುಬಾಂಬ್ ಸ್ಫೋಟ - ಜಪಾನ್ ನಿರ್ನಾಮವಾಗದಿದ್ದರೂ, ಜಪಾನೀಯತೆ ನಿರ್ಮೂಲವಾಗಿಹೋಗಿದೆ! ಕಿಂದರಿಜೋಗಿಯ ಪದ್ಯ ಮತ್ತೆ ನೆನಪಾಗಿ ಯಾಕೋ ಕಿವಿಯಲ್ಲಿ ಮೊರೆಯತೊಡಗಿತು:
"ಅಯ್ಯೋ ಹೋಯಿತೇ ಆ ನಾಕ! ಅಯ್ಯೋ ಬಂದಿತೇ ಈ ಲೋಕ!...."

(ಮುಂದಿನ ಬಾರಿ: ಕ್ಯೂಶೂನಲ್ಲಿ ಕನ್ನಡ!)

Friday, September 22, 2006

೭.ವೆಂಕಟನ ನಿರ್ಗಮನ.....?

ನನ್ನ ಜಪಾನ್ ಪ್ರವಾಸ: ೭.ವೆಂಕಟನ ನಿರ್ಗಮನ.....?


"ಏನೋ ಇದು! ಎರಡೇ ದಿನ ನಾವಿಬ್ಬರೂ ಜೊತೆಯಲ್ಲಿದ್ದುದು!......" ನನಗೆ ಆಗಲೇ ಹಿಂದಿರುಗಿ ಹೋಗಬೇಕೆನಿಸಿಬಿಟ್ಟಿತ್ತು.
"ಯಾಕೋ, ಏನಾಯ್ತೋ!?" ಎಂದೆ.

"ಫೋ.ನಿನಲ್ಲಿ ಬೇಡ; ನೀನು ಬೇಗ ಬಾ, ನಾನು ಬಹುಶಃ ಮುಂದಿನ ಸೋಮವಾರ ಭಾರತಕ್ಕೆ ಹೊರಡುತ್ತೇನೆ" ಎಂದ!

೬೦೦ ಕಿ.ಮೀ. ದೂರದಿಂದ 'ಬಾ' ಎಂದುಬಿಟ್ಟರೆ ಬರುವುದು ಹೇಗೆ? ನನಗೆ ತಳಮಳ ಶುರುವಾಯಿತು. ಸಾಲದ್ದಕ್ಕೆ ಕ್ಯೂಶೂಗೆ ಬರುವಾಗ ವೆಂಕಟನ ಕೈಚೀಲವೊಂದನ್ನು ಬೇರೆ ತೆಗೆದುಕೊಂಡು ಬಂದಿದ್ದೆ; ಈಗವನು ಹಿಂದಿರುಗುವುದಾದರೆ ಅದನ್ನು ನಾನು ಹಿಂದಿರುಗಿಸಲೇಬೇಕಿತ್ತು! ವಾರಾಂತ್ಯವೇನೋ ಹೋಗಬಹುದಿತ್ತಾದರೂ ಅಸಾಮಿ ಹೊರಡುವ ಮಾತೇ ಎತ್ತಿರಲಿಲ್ಲ; ಹೋಗಿಬರುವುದಕ್ಕೆ ಕೊಡುವ ಪ್ರಯಾಣದರವನ್ನೂ, ಒಂದು ದಿನದ ಉಚಿತ ವಸತಿ ಸೌಲಭ್ಯವನ್ನೂ ಬಳಸಿದರೆ ಅಲ್ಲೇ ತಂಗಿರಬಹುದಿತ್ತು. ಅಲ್ಲದೆ ಎರಡು ದಿನಕ್ಕೆ ಅಷ್ಟುದೂರ ಹೋಗಿ ಬರುವುದೂ ಸ್ವಲ್ಪ ಶ್ರಮದಾಯಕವೇ ಆಗಿದ್ದರಿಂದ ಅವನ ತರ್ಕದಲ್ಲಿ ತಪ್ಪಿರಲಿಲ್ಲ. ಈ ಬಾರಿ ಹೋಗದೆ ಅಲ್ಲೇ ಉಳಿದೆವು; ಆದರೆ ಮುಂದಿನ ವಾರ ವೆಂಕಟನನ್ನು ಕಡೆಯ ಬಾರಿ ಭೇಟಿಯಾಗಲಾದರೂ ನಾನು ಹೋಗಲೇ ಬೇಕಿತ್ತು. ನನ್ನ ಪುಣ್ಯಕ್ಕೆ, ಅಸಾಮಿ ಕೂಡ ಬರುವ ಭಾನುವಾರ ಯಾವುದೋ ಪರೀಕ್ಷೆಗಾಗಿ ಓಸಾಕಾಗೆ ಹೋಗಬೇಕಿತ್ತು! ಜೊತೆಗೆ ನಾನೂ ಹೋಗಬಹುದೆಂದು ನಿಟ್ಟುಸಿರಿಟ್ಟೆ. ಆದರೆ ಕೆಲಸ ನಿಧಾನಗತಿಯಲ್ಲಿದೆಯೆಂದು ಆ ವಾರಾಂತ್ಯವೂ ಕೆಲಸಮಾಡಬೇಕಾಗುತ್ತದೆಂದು ನಮ್ಮೊಡನೆ ಬಂದ ಇತರರು ಹೇಳತೊಡಗಿದಾಗ ಅಸಾಮಿಯೆಂದ:

"ನಾನು ಭಾನುವಾರ ಪರೀಕ್ಷೆಗೆ ಹೋಗಲೇಬೇಕು; ಶನಿವಾರ ಓದಿಕೊಳ್ಳಬೇಕು......ಈ ವಾರಾಂತ್ಯ ನೀನು ಇಲ್ಲೇ ಇದ್ದು ಎಲ್ಲಾ ಸರಿಯಾಗಿ ನೋಡಿಕೋ; ನಾನು ಓಸಾಕಾಗೆ ಹೋಗಿ ಬರುತ್ತೇನೆ"

ನನಗೆ ಅಳುವೋ! ಕೋಪವೋ! ಹೆದರಿಕೆಯೋ! ಏನಾಗುತ್ತಿದೆಯೆಂದೇ ತಿಳಿಯಲಿಲ್ಲ! ಸಣ್ಣನೆ ಬೆನ್ನಹುರಿಯಲ್ಲಿ ತಣ್ಣನೆ ಏನೋ ಹರಿದಂತಾಯಿತು! ವೆಂಕಟನನ್ನು ಎರಡೇ ದಿನ ನಾನು ನೋಡಿದ್ದು; ಅಲ್ಲಿಗೇ ಮುಗಿಯಿತೇ ನಮ್ಮ ಸಹವಾಸ? ದೇವರೇ ಏನಪ್ಪಾ ನನ್ನ ಸ್ಥಿತಿ ಎಂದು ಕಳವಳಗೊಂಡೆ. ಸೋಮವಾರ, ಮಂಗಳವಾರ, ಬುಧವಾರ...ಊಹ್ಞೂಂ...ಬೇರಾವ ಸುದ್ದಿಯೂ ಇಲ್ಲ; ಕೆಲಸ ಜೋರಾಗಿ ಮುಂದುವರೆದಿತ್ತು. ಗುರುವಾರವೂ ಬಂತು, ಬಹುಶಃ ನಾನು ಶನಿವಾರವೂ ಕೆಲಸಕ್ಕೆ ಬರುವಂತಾಗುತ್ತದೆ ಎಂದೆನಿಸತೊಡಗಿತ್ತು. ಅದೇನು ಆಯಿತೋ ಕಾಣೆ, ಗುರುವಾರ ಮಧ್ಯಾಹ್ನ ಯಂತ್ರ ಕೆಟ್ಟು ಕುಳಿತಿತು! ಇನ್ನಿಲ್ಲದಂತೆ ಒದ್ದಾಡಿ ಸರಿಪಡಿಸಲು ಯತ್ನಿಸಿದರು ಆ ಮಂದಿ! ಊಹ್ಞೂಂ! ಯಂತ್ರ ಅಲ್ಲಾಡಲೇ ಇಲ್ಲ; ಶುಕ್ರವಾರವೂ ಬಂತು; ಯಂತ್ರ ನಿದ್ದೆ ಬಿಟ್ಟೇಳಲಿಲ್ಲ! ಸರಿ ಓಸಾಕಾದಿಂದಲೋ, ಕ್ಯೋತೋದಿಂದಲೋ ತಜ್ಞರನ್ನು ಕರೆಸುತ್ತೇವೆ ಎಂದರು! ಅಸಾಮಿಯೆಂದ

"ನೀನೂ ಗಂಟುಮೂಟೆ ಕಟ್ಟು; ಇನ್ನು ಸೋಮವಾರವೇ ಇದರ ರಿಪೇರಿ!"

ಕುಣಿದಾಡುವಂತಾಯಿತು! ಜಪಾನಿನಲ್ಲಿ ಶುಕ್ರವಾರ ರಾತ್ರಿಯಾದರೆ ಸಾಕು, ಊರಿಗೆ ಊರೇ - ಅಲ್ಲಲ್ಲ - ದೇಶವೇ ಮಲಗಿಬಿಡುತ್ತದೆ! ಇನ್ನೆರಡು ದಿನ ವಿಶ್ರಾಂತಿಯ ನಂತರವೇ ಉಳಿದ ಚಟುವಟಿಕೆ! ಶನಿ-ಭಾನುವಾರಗಳಂದು ರೈಲಿಗೂ ವಿಶೇಷ ವೇಳಾಪಟ್ಟಿ! ನಾವು ಹೊರಡುವುದಂತೂ ಆಯಿತು ಗಟ್ಟಿ!


ಶುಕ್ರವಾರ ರಾತ್ರಿ ಶಿನ್‍ಕಾನ್‍ಸೆನ್ ಹತ್ತಿ ಓಸಾಕಾಗೆ ಬಂದಿಳಿದೆವು; ವೆಂಕಟ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದ; ನನ್ನನ್ನು ಕಂಡವನೇ,

"ಶಾಸ್ತ್ರಿಗಳೇ, ನಿಮ್ಮಿಂದ ಒಂದು ಸಹಾಯ ಬೇಕಾಗಿದೆ; ಬೇಗ ಬನ್ನಿ"

ಎನ್ನುತ್ತಾ ರೂಮಿಗೆ ಕರೆದೊಯ್ದ. ಊಟವಾಯಿತು; ಏನು ಸಮಾಚಾರವೆಂದು ವಿಚಾರಿಸಿದೆ. ಅಂಗೈ ಮುಂಚಾಚಿದವನೇ,

"ನಾನೇನು ಹೇಳಲಿ, ನೀನು ಹೇಳಯ್ಯಾ ನನ್ನ ಭವಿಷ್ಯ ಏನೂಂತ....."

"ಏ! ತಮಾಷೆ ಸಾಕು; ಏನಾಯ್ತು ಹೇಳೋ ಸರಿಯಾಗಿ" ಎಂದೆ.

ಅವನು ಕಛೇರಿಯಲ್ಲಿ ಅವನ ಹಾಗೂ ಮೇಲಧಿಕಾರಿಯ ನಡುವಿನ ಘರ್ಷಣೆಯ ಕತೆಯನ್ನೆಲ್ಲಾ ಹೇಳಿದ; ಒಟ್ಟಿನಲ್ಲಿ ಭಾರತದ ಮೂಲ ಕಛೇರಿಗೇ ಇವನನ್ನು ಸಾಗಹಾಕುವುದೆಂದು ತೀರ್ಮಾನವಾಗಿತ್ತು. ನಾಳಿದ್ದು ಬೆಳಿಗ್ಗೆಯೇ ಪ್ರಯಾಣವೆಂದ. ಇನ್ನೂ ಕಛೇರಿಯ ಹಿಂದು-ಮುಂದು ತಿಳಿಯದ ನಾನೇನೂ ಹೇಳದಾದೆ!

"ಅದಕ್ಕೇ ಕೇಳಿದ್ದು.. ಮುಂದೆ ನನ್ನ ಭವಿಷ್ಯ ಏನೆಂದು ಹೇಳಯ್ಯಾ...ಅಲ್ಲಿ ಇನ್ನೇನು ತರಲೆಗಳು ಕಾದಿದೆಯೋ.." ಕೈಚಾಚಿದ.

ನಾನು ಹಸ್ತಸಾಮುದ್ರಿಕದಿಂದ ಇಂತಹ ಪರಿಸ್ಥಿತಿಯಲ್ಲಿ ಅವನಿಗೆ ಪರಿಪೂರ್ಣ ಉತ್ತರ ನೀಡುವುದು ಕಷ್ಟವಾದರೂ ನೋಡಿದೆ - ಅಂತಹ ತರಲೆ ಗೆರೆಗಳಾವುದೂ ಕಾಣಲಿಲ್ಲ! ಅಷ್ಟರಲ್ಲಿ ಬಂತು ಪ್ರಶ್ನೆ -

"ನಾನು ಅಲ್ಲಿಗೆ ಹೋದರೂ, ಆಕೆಲಸ ಬಿಟ್ಟು ಬೇರೆ ಕಡೆ ಕೆಲಸ ಹುಡುಕೋಣವೆಂದಿದ್ದೇನೆ; ಏನೆನ್ನುತ್ತೀಯೆ?"

ಅವನ ಅಂಗೈಯಲ್ಲಿ ಅಂಥ ಯಾವ ಕುರುಹೂ ಕಾಣಲಿಲ್ಲ; ನನಗೆ ಉತ್ತರವೂ ಹೊಳೆಯಲಿಲ್ಲ! ನಾನು ಉತ್ತರಿಸಬೇಕಿದ್ದುದು ಒಬ್ಬನ ಭವಿಷ್ಯ ನಿರ್ಧರಿಸುವ ಪ್ರಶ್ನೆಯಾದ್ದರಿಂದ ತಮಾಷೆಗೆ ಕೇಳಿದ ಸ್ನೇಹಿತರಿಗೆ ಹೇಳುವಂತೆ ಹಾರಿಕೆಯ ಉತ್ತರ ಕೊಡಲಾರದಾದೆ. ಏನನ್ನೋ ಯೋಚಿಸಿದವನೇ, "ಒಂದು ನಿಮಿಷ ಇರು" ಎಂದು ಪೆಟ್ಟಿಗೆಯಿಂದ ಪಂಚಾಂಗ ಹೊರತೆಗೆದೆ! ಯಾರು ನಂಬುವರೋ ಬಿಡುವರೋ, ಇಲ್ಲಿಯವರೆಗೂ ನನಗೆ ಮಾರ್ಗದರ್ಶನ ಮಾಡಿಕೊಂಡು ಬಂದ ಜ್ಯೋತಿಷಶಾಸ್ತ್ರಕ್ಕೆ, ನವಗ್ರಹಗಳಿಗೆ, ನನ್ನ ಆರಾಧ್ಯ ದೈವ ಮಹಾಗಣಪತಿಗೆ ನಮಸ್ಕರಿಸಿ, ಏಕಾಗ್ರತೆಯಿಂದ ಕುಳಿತು ವೆಂಕಟನನ್ನು ನೋಡಿ,

"ಏನು ನಿನ್ನ ಪ್ರಶ್ನೆ?" ಎಂದೆ.

"ನಾನು ಈಗಿನ ಕೆಲಸ ಬಿಡಲೋ ಅಥವಾ ಮುಂದುವರೆಯಲೋ? ಭವಿಷ್ಯದಲ್ಲಿ ಯಾವುದು ಒಳ್ಳೆಯದು?"

ನಾನು ಪ್ರಶ್ನಕುಂಡಲಿ ಬರೆದು "ನಿನ್ನ ನಕ್ಷತ್ರವೇನು?" ಎಂದೆ.

"ಸ್ವಾತಿ"

ಕುಂಡಲಿ ಅಷ್ಟಮಶನಿಯನ್ನು ತೋರಿಸುತ್ತಿತ್ತು; ಇಂಥಹ ತರಲೆಗಳು ಈ ಸಮಯದಲ್ಲಿ ಸರ್ವೇ ಸಾಮಾನ್ಯ! ಸರಿ ಶನಿಯ ಸ್ಥಿತಿ ಉತ್ತಮವಾಗುವವರೆಗೂ ಕೆಲಸ ಬದಲಿಸದಿರುವುದೇ ಒಳ್ಳೆಯದು ಎಂದು ನಿರ್ಧರಿಸಿದೆ; ಇಲ್ಲದಿದ್ದರೆ ಕೆಲಸವೇ ಇಲ್ಲವಾಗುವ ಸಾಧ್ಯತೆಯೂ ತೋರಿತು.

"ಜುಲೈ ೮ ನೇ ತಾರೀಖಿನವರೆಗೂ ಸುಮ್ಮನಿರು; ಕಛೇರಿ ಬಿಡುವುದಿದ್ದರೆ, ಆಮೇಲೆ ಯೋಚಿಸಿನೋಡು" ಎಂದೆ.

"ಸರಿ, ಗುರುಗಳೇ!" ಎಂದ. ನಾನು ನಿಧಾನವಾಗಿ ಸಮಾಧಾನ ಹೇಳಿದೆ. ಬೇಗ ಬೇಗ ಗಂಟು ಮೂಟೆ ಕಟ್ಟಿದ; ಇಬ್ಬರೂ ಮಲಗಿದಾಗ ರಾತ್ರಿ ೨ ಗಂಟೆ!
















ಬೆಳಿಗ್ಗೆ ವೆಂಕಟ ಎದ್ದು ಅಡುಗೆ ಮಾಡಿದ; ರೂಮಿನಲ್ಲಿದ್ದ ಅಡುಗೆ ಸಲಕರಣೆ, ಪಾತ್ರೆ, ಸಾಂಬಾರು ಪದಾರ್ಥಗಳನ್ನೆಲ್ಲಾ ನನಗೇ ಬಿಟ್ಟ! ಇದ್ದಕ್ಕಿದ್ದಂತೆ ಮೌನ ಆವರಿಸಿತು.

"ನಾನೊಬ್ಬ ಇಲ್ಲಿಂದ ವಾಪಸ್ ಹೋಗುವಂತಾಯ್ತಲ್ಲೋ!" ಎಂದ. ಪಾಪ! ಅವನಿಗೆ ಹೀಗೆ ಹಿಂದಿರುಗಲು ಇಷ್ಟವಿರಲಿಲ್ಲ!

ನಾನೆಂದೆ "ಲೋ! ಸಂತೋಷಪಡು! ಅಮ್ಮನ ಕೈಯಡುಗೆ, ಮಸಾಲೆದೋಸೆ, ನಿನ್ನ ಪ್ರಿಯಾಹಾರ ಗೋಬಿ ಮಂಚೂರಿಯನ್ ಎಲ್ಲ ತಿನ್ನಬಹುದು ಅಂತ ಖುಷಿಪಡೋ! ಇಲ್ಲೇನಿದೆ - ಸೆರೆಮನೆ!"

ನಕ್ಕ; ನಗುವಿರಲಿಲ್ಲ! ಸರಿ, ಭಾನುವಾರದವರೆಗೆ ಅವನೊಡನೆ ಕಾಲ ಕಳೆದೆ. ರಾತ್ರಿ ನಾನು ಕ್ಯೂಶೂದ್ವೀಪಕ್ಕೆ ಹೊರಡಬೇಕಿತ್ತು. ವೆಂಕಟ ಪಕ್ಕದ ರೂಮಿನ ಸಹೋದ್ಯೋಗಿಗೆ ಕೀಲಿಕೈ ಕೊಟ್ಟು ಹೋಗುತ್ತೇನೆಂದ. ಕಡೆಯ ಬಾರಿ ಧೈರ್ಯ ಹೇಳಿ, ಕೈಕುಲುಕಿದೆ.

"ನಾಳೆ ಬೆಳಿಗ್ಗೆ ವಿಮಾನ ಹತ್ತುತ್ತೇನೆ; ಮತ್ತೆ ಭಾರತದಲ್ಲೇ ಏನೋ ನಮ್ಮ ಭೇಟಿ!"

"ಆದರೆ, ನಮ್ಮ ಮನೆಗೆ ಹೋಗಿ ಬಾ"

ತಲೆಯಾಡಿಸಿದ. ಗೋವರ್ಧನ ಬಂದವನೇ ಅವನ ಬೆನ್ನುತಟ್ಟಿದ. ವೆಂಕಟನಿಗೆ ಕೈಬೀಸಿ ಭಾರಹೃದಯದಿಂದ ಬೀಳ್ಕೊಂಡೆ ಅಲ್ಲ ಬೀಳ್ಕೊಟ್ಟೆ! ನಾನು ಶಿನ್‍ಓಸಾಕಾ ಎಕಿ[=ನಿಲ್ದಾಣ] ತಲುಪಿದಾಗ ಅಸಾಮಿ ಸಿಕ್ಕಿದ. ಯಥಾಪ್ರಕಾರ 'ಹಿಕಾರಿ' ಹತ್ತಿ ಹೊರಟೆವು. ನನ್ನ ಮನದ ತುಂಬಾ ಭವಿಷ್ಯದ್ದೇ ಚಿಂತೆ ತುಂಬಿತ್ತು. ನನ್ನನ್ನೇನಾದರೂ ಹಿಂದಿರುಗಿ ಹೋಗೆಂದರೆ ಈಗಲೇ ಸಿದ್ಧ ಎಂದುಕೊಂಡೆ!


ಜಪಾನೆಂಬುದು ತಾಂತ್ರಿಕ ಜೈಲು!
ಜೈಲಿನೊಳಗೆ ವೇಗದ ರೈಲು!
ರೈಲಿನೊಳಗೆ ಇವನೊಬ್ಬ ಐಲು!
ಜೈಲು-ರೈಲು-ಐಲು-ಜೀವನವೆಲ್ಲಾ ಫೇ.ಲು!


ಪೆದ್ದು ಪೆದ್ದಾಗಿ ನಾನೇ ಆಶುಕವಿತೆ ಬಡಬಡಿಸಿಕೊಂಡೆ. ಅಷ್ಟರಲ್ಲಿ ಅಸಾಮಿ

"ಫೇಲಾಗಬಹುದು!" ಎಂದ.ನಾನು ಗಾಬರಿಯಾದೆ! ಇವನಿಗೆ ಕನ್ನಡ ಬರುತ್ತದೆಯೇ ಎಂದುಕೊಳ್ಳುತ್ತಿರುವಂತೆಯೇ,

"ನಾನಿವತ್ತು ಬರೆದ ಪರೀಕ್ಷೆಯಲ್ಲಿ ಫೇ.ಲಾಗಬಹುದು" ಎಂದ.

ಸದ್ಯ, ಇಷ್ಟೇನೇ! ನಾನೆಲ್ಲೋ ಆಶುಕವಿತೆ ಇವನಿಗೆಲ್ಲಿ ಅರ್ಥವಾಯಿತೋ ಎಂದುಕೊಂಡಿದ್ದೆ!

"ಜಾ.ನ್ನೆನ್ ದೇಸ್‍ನೇ" [= ಅಯ್ಯೋ! ಹೌದೇ, ಪಾಪ!] ಎಂದು ಕಿತ್ತಲೆರಸಕ್ಕೆ ಕೈಹಾಕಿದೆ. ನನ್ನ ಮನದಾಳದ ಮೂಲೆಯಲ್ಲಿ ವೆಂಕಟನ ನಿರ್ಗಮನ ಅಚ್ಚೊತ್ತಿದ್ದರೂ, ಮತ್ತೊಮ್ಮೆ ಅವನು ಬರುವನೆಂದು ಏಕೋ ಎನಿಸತೊಡಗಿತ್ತು. ಎಂದಿರಬಹುದು......?

* * * * *
(ಮುಂದಿನ ಬಾರಿ: ಹಳೆಯ ರಾಜ್ಯ ಇನ್ನಿಲ್ಲ...)